ಸರ್ಕಾರಿ ನೌಕರರಿಗೆ ಡಬಲ್ ಬಂಪರ್ ಗಿಫ್ಟ್ ನೀಡಲಿರುವ ಸಿಎಂ..!

27 Jan 2018 12:54 PM | Politics
381 Report

ವಿಧಾನಸಭೆ ಚುನಾವಣೆ ವೇಳೆ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಮೂಗಿಗೆ ತುಪ್ಪ ಸವರಲು ಮುಂದಾಗಿದ್ದಾರೆ. ರಾಜ್ಯದಲ್ಲಿರುವ ಸುಮಾರು 6.2 ಲಕ್ಷ ಸರ್ಕಾರಿ ನೌಕರರು ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್‍ನಲ್ಲಿ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯನವರು ಇದನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 10,800 ಕೋಟಿ ಹೊರೆಯಾಗಲಿದೆ.

ಇನ್ನು ಸರ್ಕಾರಿ ನೌಕರರಿಗೆ ಇನ್ನು ಮುಂದೆ ಬ್ಯಾಂಕ್ ಸಿಬ್ಬಂದಿಗೆ ನೀಡುವಂತೆ ಪ್ರತಿ ತಿಂಗಳ 4ನೇ ಶನಿವಾರ ರಜೆ ಸಿಗಲಿದೆ. ನಾಲ್ಕು ಭಾನುವಾರಗಳ ಜೊತೆಗೆ ತಿಂಗಳ ಕೊನೆಯ ಶನಿವಾರವನ್ನು ಸರ್ಕಾರಿ ರಜೆ ಎಂದು ಘೋಷಿಸಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ನೇತೃತ್ವದ ಸಮಿತಿಯು ವೇತನ ಹೆಚ್ಚಳ ಮತ್ತು ಪಿಂಚಣಿಗೆ ಸಂಬಂಧಿಸಿದಂತೆ ಈ ತಿಂಗಳ 31ಕ್ಕೆ ವರದಿಯನ್ನು ಸರ್ಕಾರಕ್ಕೆ ನೀಡಲಿದೆ. ಈಗಾಗಲೇ ಎಲ್ಲ ಇಲಾಖೆಯ ಮುಖ್ಯಸ್ಥರಿಂದ ಅಹವಲುಗಳನ್ನು ಸ್ವೀಕರಿಸಿದ್ದು, 31ಕ್ಕೆ ಅಂತಿಮ ವರದಿಯನ್ನು ನೀಡಲಿದೆ. ಸರ್ಕಾರಿ ನೌಕರರಿಗೆ ಶೇ.24ರಿಂದ 30ರಷ್ಟು ವೇತನ ಏರಿಕೆಯಾಗಲಿದೆ.

ಕೇಂದ್ರದ ಸರ್ಕಾರಿ ನೌಕರರಿಗೆ ಹೋಲಿಸಿದರೆ ಶೇ.65ರಷ್ಟು ವೇತನ ತಾರತಮ್ಯವಿದೆ ಎಂಬುದು ರಾಜ್ಯ ಸರ್ಕಾರಿ ನೌಕರರ ಅಸಮಾಧಾನವಾಗಿತ್ತು. ಇದೀಗ ವರದಿಯ ಶಿಫಾರಸ್ಸಿನಂತೆ ಹೆಚ್ಚಳ ಮಾಡಿದರೆ ಇನ್ನು 35ರಷ್ಟು ತಾರತಮ್ಯ ಇರಲಿದೆ. ಒಂದು ವೇಳೆ ವರದಿಯ ಶಿಫಾರಸ್ಸಿನಂತೆ ಶೇ.24ರಿಂದ 30ರಷ್ಟು ವೇತನ ಹೆಚ್ಚಳವಾದರೆ ನೌಕರರ ವೇತನ 3000ದಿಂದ 12000ದವರೆಗೆ ಏರಿಕೆಯಾಗಲಿದೆ. ಒಬ್ಬ ತಹಸೀಲ್ದಾರ್ 50 ಸಾವಿರ ತಿಂಗಳ ವೇತನ ಪಡೆಯುತ್ತಿದ್ದರೆ, 12 ಸಾವಿರ ಹೆಚ್ಚುವರಿ ವೇತನ ಪಡೆಯಲಿದ್ದಾರೆ. ಅದೇ ರೀತಿ ಪಿಂಚಣಿದಾರರಿಗೂ ಹೆಚ್ಚಳವಾಗಲಿದ್ದು, ಉದಾಹರಣೆಗೆ 12 ಸಾವಿರ ಪಿಂಚಣಿ ಪಡೆಯುತ್ತಿದ್ದ ನಿವೃತ್ತಿ ನೌಕರ 15 ಸಾವಿರದವರೆಗೂ ಪಡೆಯಲಿದ್ದಾರೆ. ತಿಂಗಳ ಪಿಂಚಣಿಯು 3000ದಿಂದ 3600 ರೂ.ವರೆಗೆ ಏರಿಕೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಬಿಜೆಪಿ ಅವಧಿಯಲ್ಲಿ ಏರಿಕೆ : ಈ ಹಿಂದೆ ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದಗೌಡ ಅವರು ಸರ್ಕಾರಿ ನೌಕರರ ವೇತನವನ್ನು ಶೇ.22ರಷ್ಟು ಹೆಚ್ಚಳ ಮಾಡಿದ್ದರು. ವೇತನ ಪರಿಷ್ಕರಣೆ ಮಾಡುವಂತೆ ಈಗಾಗಲೇ ಸರ್ಕಾರಿ ನೌಕರರ ಸಂಘ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಇದೆ.

Edited By

venki swamy

Reported By

Madhu shree

Comments