ಉತ್ತರ ಕನ್ನಡದ ಕಾಂಗ್ರೆಸ್ ಶಾಸಕರಿಬ್ಬರಿಗೆ ಸಂಕಷ್ಟ……ಜೆಡಿಎಸ್ ಗೆ ಲಾಭ

25 Jan 2018 11:56 AM | Politics
7216 Report

ಬೇಲೆಕೇರಿ ಅದಿರು ಅಕ್ರಮ ರಫ್ತು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಾಜ್ಯ ಸರ್ಕಾರ ನಿಯೋಜಿಸಿರುವುದು ಇದೀಗ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಶಾಸಕರಿಗೆ ಮತ್ತೆ ಆತಂಕ ತಂದಿಟ್ಟಿದೆ. ಕಾರವಾರದ ಶಾಸಕ ಸತೀಶ್ ಸೈಲ್ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಗೆ ಎಸ್ಐಟಿ ತನಿಖೆ ಮುಳುವಾಗುವ ಸಾಧ್ಯತೆ ಇದೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಬಿಜೆಪಿ ಮುಖಂಡರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ರಾಜ್ಯ ಸರ್ಕಾರ ಈ ಎಸ್ಐಟಿ ತಂತ್ರ ರೂಪಿಸಿದೆ. ಆದರೆ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ತದ್ವಿರುದ್ಧವಾಗಲಿದ್ದು, ಕಾಂಗ್ರೆಸ್ ಪಕ್ಷದ ರಾಜಕಾರಣಿಗಳಿಗೇ ತೊಂದರೆಯೊಡ್ಡಲಿದೆ.ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಸಿಬಿಐ 2012 ರ ಸೆ. 16 ರಂದು ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ದಾಳಿ ಮಾಡಿ, 2013ರ ಸೆ. 20 ರಂದು ಸೈಲ್ ಅವರನ್ನು ಬಂಧಿಸಿತ್ತು. ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪೆನಿಯು ಐಎಲ್ಸಿ ಇಂಡಸ್ಟ್ರೀಸ್ ಪ್ರೈ. ಲಿ., ಡ್ರೀಮ್ ಲಾಜಿಸ್ಟಿಕ್ ಹಾಗೂ ಎಸ್.ಬಿ ಲಾಜಿಸ್ಟಿಕ್ ಎಂಬ ಕಂಪನಿಗಳ ಜತೆಗೂಡಿ ಬೇಲೆಕೇರಿ ಬಂದರಿನ ಮೂಲಕ 80 ಲಕ್ಷ ಟನ್ ಅದಿರನ್ನು ಅಕ್ರಮವಾಗಿ 2009ರ ಜನವರಿ 1 ರಿಂದ 2010 ರ ಮೇ ತಿಂಗಳವರೆಗೆ ರಫ್ತು ಮಾಡಿದೆ ಎಂದು ಸಿಬಿಐ 2013ರ ಡಿಸೆಂಬರ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.ಇದರಿಂದಾಗಿ ಸೈಲ್ ವರ್ಷಕ್ಕೂ ಅಧಿಕ ಕಾಲ ಜೈಲು ವಾಸ ಅನುಭವಿಸಬೇಕಾಯಿತು. ಅದರ ನಂತರ 2014ರ ಡಿಸೆಂಬರ್ 16ಕ್ಕೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.

ಹೌದು, ಸತೀಶ್ ಸೈಲ್ ಗಣಿ ಭೂತದ ಭಯದಿಂದ ಕಾಂಗ್ರೆಸ್ ನ ಚಟುವಟಿಕೆಗಳಿಂದ ಕೂಡ ದೂರ ಉಳಿದಿದ್ದಾರೆ. ಸುದ್ದಿಗೋಷ್ಠಿಗಳಲ್ಲಿ ಸೈಲ್ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಸ್ಥಳೀಯವಾಗಿ ಇದ್ದರೂ ಕೂಡ ಸಬೂಬು ಹೇಳಿ ಕಾಂಗ್ರೆಸ್ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ.ಸದ್ಯ ಚುನಾವಣೆಯ ಕಾವು ಶುರುವಾಗಿರುವುದರಿಂದ ಹಾಗೂ ಜೆಡಿಎಸ್ ಗೆ ಆನಂದ್ ಅಸ್ನೋಟಿಕರ್ ಬಲ ತುಂಬಿರುವುದರಿಂದ, ಇದು ಕಾಂಗ್ರೆಸ್ ಗೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಇದು ಜೆಡಿಎಸ್ ಗೆ ಪ್ಲಸ್ ಪಾಯಂಟ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಐ ಇದೇ ಗಣಿ ಅಕ್ರಮದ ಆರೋಪದಡಿ ಯಲ್ಲಾಪುರ ಮೂಲದ ಡ್ರೀಮ್ ಲಾಜಿಸ್ಟಿಕ್ಸ್ ಎಂಬ ಕಂಪನಿಯ ಮಾಲೀಕ ವಿವೇಕ ಹೆಬ್ಬಾರ್ ಅವರ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕಿತ್ತು. 2013ರ ಡಿಸೆಂಬರ್ ನಲ್ಲಿ ಸಿಬಿಐ ವಿವೇಕ್ ಅವರನ್ನು ಬಂಧಿಸಿ ತನಿಖೆಗೊಳಪಡಿಸಿತ್ತು.ಡ್ರೀಮ್ ಲಾಜಿಸ್ಟಿಕ್ ಕಂಪನಿ 50.7 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಿಸಿದೆ ಎಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಬಂಧಿಸಲ್ಪಿಟ್ಟಿದ್ದ ಈ ವಿವೇಕ ಹೆಬ್ಬಾರ್ ಬೇರಾರು ಅಲ್ಲ. ಕಾಂಗ್ರೆಸ್ ಪಕ್ಷದ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ. ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಗಣಿ ಹಗರಣದಲ್ಲಿ ಬಂಧಿತನಾಗಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಜತೆಗೆ ಶಾಸಕ ಶಿವರಾಮ ಹೆಬ್ಬಾರ್ 2010ಕ್ಕೂ ಪೂರ್ವದಲ್ಲಿ ಡ್ರೀಮ್ ಲಾಜಿಸ್ಟಿಕ್ಸ್ ಕಂಪನಿಯ ನಿರ್ದೇಶಕರಾಗಿದ್ದರಿಂದ ಶಿವರಾಮ್ ಹೆಬ್ಬಾರ್ ಗೂ ಕೂಡ ಈ ಪ್ರಕರಣದ ಬಿಸಿ ತಟ್ಟಲಿದೆ‌.ಹೀಗಾಗಿ ಎಸ್ಐಟಿ ತನಿಖೆ ಈ ಇಬ್ಬರು ಕಾಂಗ್ರೆಸ್ ರಾಜಕಾರಣಿಗಳಿಗೆ ಮುಳುವಾಗಲಿದೆ.

ರಾಜ್ಯ ಸರ್ಕಾರ ನಿಯೋಜಿಸಿರುವ ಈ ವಿಶೇಷ ತನಿಖಾ ತಂಡ ಕಾಂಗ್ರೆಸ್ ಗೆ ವೀಕ್ ಪಾಯಂಟ್ ಆಗಲಿದೆ. ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ತನ್ನದೇ ಆದ ರೀತಿಯಲ್ಲಿ ರಣತಂತ್ರ ರೂಪಿಸುತ್ತಿದೆ. ಅಲದೆ ಬಿಜೆಪಿ ತೊರೆದ ಆನಂದ್ ಅಸ್ನೋಟಿಕರ್ ಜೆಡಿಎಸ್ ಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇವೆಲ್ಲವು ಜೆಡಿಎಸ್ ಗೆ ಲಾಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

 

Edited By

Shruthi G

Reported By

Shruthi G

Comments