ನರೇಂದ್ರ ಮೋದಿ ಅವರಿಗೆ ತಾವು ಪ್ರಧಾನಮಂತ್ರಿ ಎಂಬ ಅಹಂ ಇದೆ : ಅಣ್ಣಾ ಹಜಾರೆ

22 Jan 2018 12:10 PM | Politics
523 Report

ನರೇಂದ್ರ ಮೋದಿ ಅವರಿಗೆ ತಾವು ಪ್ರಧಾನಮಂತ್ರಿ ಎಂಬ ಅಹಂ ಆವರಿಸಿಕೊಂಡಿದೆ ಎಂದು ಭಷ್ಟಾಚಾರ ವಿರೋಧಿ ಅಭಿಯಾನದ ಹೋರಾಟಗಾರ ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತೆಹ್ಸಿಲ್ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಣ್ಣಾ ಹಜಾರೆ ಜನಲೋಕಪಾಲ್ ಜಾರಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಮೋದಿಗೆ ತಾನು ಪ್ರಧಾನ ಮಂತ್ರಿ ಎಂಬ ಅಹಂ ಆವರಿಸಿಕೊಂಡಿದೆ. ಹಾಗಾಗಿ ಅವರು ನಮ್ಮ ಪತ್ರಗಳಿಗೆ ಇದುವರೆಗೂ ಉತ್ತರಿಸುತ್ತಿಲ್ಲ ಎಂದು ಹೇಳಿದ್ದಾರೆ.

"ನಾನು ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿಗೆ ಸುಮಾರು ಮೂವತ್ತು ಪತ್ರಗಳನ್ನು ಬರೆದಿದ್ದೇನೆ. ಆದರೆ ಅವರು ಯಾವುದೇ ಒಂದು ಪತ್ರಕ್ಕೂ ಉತ್ತರ ಬರೆದಿಲ್ಲ. ಮೋದಿಗೆ ತಾವು ಪ್ರಧಾನಿ ಎಂಬ ಅಹಂ ಇದ್ದು, ಇದೇ ಕಾರಣಕ್ಕೆ ನನ್ನ ಪತ್ರಗಳಿಗೆ ಉತ್ತರಿಸಿಲ್ಲ ಎಂದು ಹೇಳಿದರು. ಇನ್ನು ಜನಲೋಕಪಾಲ್ ಜಾರಿಗಾಗಿ ತಾವು ಎರಡನೇ ಸುತ್ತಿನ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತಿದ್ದು, ಇದೇ ಮಾರ್ಚ್ 23ರಿಂದ ದೆಹಲಿಯಲ್ಲಿ ಎರಡನೇ ಸುತ್ತಿನ ಸತ್ಯಾಗ್ರಹ ಆರಂಭಿಸುವುದಾಗಿ ಹಜಾರೆ ಹೇಳಿದ್ದಾರೆ. ಅಂತೆಯೇ ಇದೊಂದು ಹಿಂದೆಂದೂ ಕಂಡುಕೇಳರಿಯದ ಸತ್ಯಾಗ್ರಹವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ. ಈ ಸಭೆ ಮತ್ತು ಸತ್ಯಾಗ್ರಹಗಳ ಮೂಲಕ ಮತಗಳನ್ನು ಪಡೆಯುವ ಯಾವುದೇ ಇರಾದೆಯು ನನಗಿಲ್ಲ. ಜನಲೋಕಪಾಲ್ಗಾಗಿ ನಡೆಸಿದಂಥ ಬೃಹತ್ ಸತ್ಯಾಗ್ರಹದ ಮಾದರಿಯಲ್ಲೇ ರೈತರ ಬಗೆಗಿನ ಸತ್ಯಾಗ್ರಹವೂ ಇರಲಿದೆ ಎಂದು ಹಜಾರೆ ಹೇಳಿದ್ದಾರೆ. ಈ ಬಾರಿಯ ಸತ್ಯಾಗ್ರಹದಲ್ಲಿ ಲೋಕಪಾಲ್ ಅನುಷ್ಟಾನ, ಲೋಕಾಯುಕ್ತರ ನೇಮಕ, ರೈತರಿಗೆ 5,000 ರೂ. ಪಿಂಚಣಿ ಮತ್ತು ರೈತರ ಬೆಳೆಗಳಿಗೆ ಹೆಚ್ಚಿನ ದರ ನಿಗದಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗುವುದು ಎಂದು ಹಜಾರೆ ಹೇಳಿದ್ದಾರೆ. ಇನ್ನು ತಮ್ಮ ಮುಂದಿನ ಸತ್ಯಾಗ್ರಹಕ್ಕೆ ಬೆಂಬಲವನ್ನು ಕೋರಿ ಹಜಾರೆಯವರು ನಡೆಸುತ್ತಿರುವ ಮೂರು ಸಾರ್ವಜನಿಕ ಸಭೆಗಳ ಪೈಕಿ ಅಟ್ಪಾಡಿಯಲ್ಲಿ ನಡೆದ ಸಭೆ ಮೊದಲನೆಯದಾಗಿದೆ.

Edited By

Shruthi G

Reported By

Madhu shree

Comments