ಕಾರವಾರದಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ..!!

21 Jan 2018 11:47 AM | Politics
594 Report

ಬಿಜೆಪಿಗೆ ವಿದಾಯ ಹೇಳಿ ಜ. 15 ರಂದು ಜೆಡಿಎಸ್ ಸೇರ್ಪಡೆಯಾಗಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಾರವಾರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರ ಜೊತೆ ಸೇರಿ ಭರ್ಜರಿ ರೋಡ್ ಶೋ ಮಾಡಿದರು.

ನಗರದ ಮುಖ್ಯರಸ್ತೆ ಕೋಡಿಭಾಗದಿಂದ ಸುಭಾಷ್ ಸರ್ಕಲ್ ಹಾಗೂ ಅಂಬೇಡ್ಕರ್ ಸರ್ಕಲ್‌ವರೆಗೆ ಮೂರು ಸಾವಿರಕ್ಕೂ ಹೆಚ್ಚು ಯುವಕರು 5 ಕಿ.ಮೀ. ಉದ್ದಕ್ಕೆ ಬೈಕ್ ಜಾಥಾ ಮಾಡುವ ಮೂಲಕ ಜೆಡಿಎಸ್ ಪಕ್ಷದ ಅಸ್ತಿತ್ವವನ್ನು ಮೊದಲ ಬಾರಿಗೆ ಸಾಭೀತು ಪಡಿಸಿದರು. ತೆರೆದ ಜೀಪ್‍ನಲ್ಲಿದ್ದ ಮಧು ಬಂಗಾರಪ್ಪ ಹಾಗೂ ಮಾಜಿ ಸಚಿವ ಆನಂದ್‌ ಅಸ್ನೋಟಿಕರ್ ಅವರನ್ನು ಹಿಂಬಾಲಿಸಿದರು. ಎರಡು ಗಂಟೆಗೂ ಹೆಚ್ಚು ಸಮಯ ಬೈಕ್ ಜಾಥಾ ನಡೆಯಿತು. ಬೈಕ್ ಜಾಥಾಗೆ ಮುನ್ನ ಕೋಡಿಭಾಗದ ಆಂಜನೇಯ ದೇವಸ್ಥಾನದಲ್ಲಿ ಮಧು ಮತ್ತು ಅಸ್ನೋಟಿಕರ್ ಪೂಜೆ ಸಲ್ಲಿಸಿದರು.

ಬೈಕ್ ಜಾಥಾದ ನಂತರ ಅಂಬೇಡ್ಕರ್ ಸರ್ಕಲ್‍ನಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾಜಿ ಸಚಿವ ಆನಂದ್‌ ಅಸ್ನೋಟಿಕರ್ ಮಾತನಾಡಿದರು. ದ್ವೇಷ ರಾಜಕಾರಣ ನಾನು ಮಾಡಿಲ್ಲ. ಮುಂದೆಯೂ ಮಾಡಿಲ್ಲ. ಆದರೆ ನನ್ನ ಬೆಂಬಲಿಗರಿಗೆ ಬೆದರಿಕೆಯ ಕರೆಗಳನ್ನು ಕೆಲವರು ಮಾಡುತ್ತಿದ್ದಾರೆ. ನಾನು ರಾಜಕೀಯಕ್ಕೆ ಬರಬಾರದು ಎಂದು ಕೆಲವರು ಹೀಗೆ ಮಾಡಿಸುತ್ತಿದ್ದಾರೆ. ನಾನು ಅಧಿಕಾರದಲ್ಲಿ ಇದ್ದಾಗಲೂ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಆನಂದ ಅಸ್ನೋಟಿಕರ್ ಸ್ಪಷ್ಟಪಡಿಸಿದರು. ಹಾಲಿ ಶಾಸಕರಿಗೆ ನಾನು ಕೇಳುವುದಿಷ್ಟೇ. ಫ್ರೆಂಡ್ಲಿ ಮ್ಯಾಚ್ ಆಡೋಣ. ನಾನು ಈಗಾಗಲೇ ಶಾಸಕತ್ವ ಅನುಭವಿಸಿದ್ದೇನೆ. ಮಂತ್ರಿಯೂ ಆಗಿದ್ದೇನೆ. ಯುವಕರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಮರಳಿದ್ದೇನೆ.

ರಾಜಕೀಯದಿಂದ ನನಗೆ ಆಗಬೇಕಾದ್ದು ಏನು ಇಲ್ಲ. ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಅವಾಚ್ಯ ಶಬ್ದಗಳಿಂದ ಮತದಾರರಿಗೆ ಬೈದ ದೂರು ನಿಮ್ಮ ಮೇಲಿದೆ. ಹಾಗಾಗಿ ನಾನು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಅಭಿವೃದ್ಧಿಗಾಗಿ ಬಂದಿದ್ದೇನೆ ಎಂದರು.ಹಿಂದೆ ಕಾರವಾರದಲ್ಲಿ ಬಿ.ಪಿ.ಕದಂ ಮತ್ತು ಪಿ.ಎಸ್.ರಾಣೆ ಅವರಂಥ ಸಜ್ಜನರು ರಾಜಕೀಯ ಮಾಡಿದ್ದಾರೆ. ಅವರು ಜನರನ್ನು ಬೈದಿರಲಿಲ್ಲ. ವಸಂತ ಅಸ್ನೋಟಿಕರ್ ಸಹ ಜನಪರ ರಾಜಕಾರಣ ಮಾಡಿದ್ದಾರೆ. ಹಾಗಾಗಿ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

 

Edited By

Shruthi G

Reported By

Shruthi G

Comments