ಬಿಜೆಪಿಗೆ ಟಾಂಗ್ ನೀಡಲು ಮುಂದಾಗಿರುವ ಜೆಡಿಎಸ್..!!

20 Jan 2018 1:04 PM | Politics
9432 Report

ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಸಿ.ಎಂ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಜೆಡಿಎಸ್​ಗೆ ಸೇರ್ಪಡೆಗೊಳ್ಳುವ ಇಂಗಿತ ವ್ಯೆಕ್ತಪಡಿಸಿದ್ದಾರೆ ಎನ್ನಲಾಗಿದ್ದು ಈ ಮೂಲಕ ತಮ್ಮ ಪಕ್ಷದ ಇಬ್ಬರು ಶಾಸಕರನ್ನು ಆಪರೇಷನ್ ಕಮಲದ ಮೂಲಕ ಕಳೆದ ಎರಡು ದಿವಸಗಳ ಹಿಂದೆ ಸೆಳೆದುಕೊಂಡ ಬಿಜೆಪಿಗೆ ಜೆಡಿಎಸ್ ಟಾಂಗ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಸಿ.ಎಂ ಸಿದ್ದರಾಮಯ್ಯ ಅವರ ವಿರುದ್ದ ಸಿಡಿದೆದ್ದು, ಬಿಜೆಪಿ ಸೇರಿದ್ದರೂ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಳ್ಳದ ಪ್ರಸಾದ್​ರನ್ನು ಸೆಳೆಯುವ ಮೂಲಕ ದಲಿತರ ಓಲೈಕೆ ಜತೆಗೆ ರಾಜಕೀಯ ಎದುರಾಳಿ ಸಿದ್ದರಾಮಯ್ಯ ಮಣಿಸಲು ತಂತ್ರಗಾರಿಕೆ ಹೆಣೆಯಲು ಜೆಡಿಎಸ್ ನಿರ್ಧರಿಸಿದೆ ಎನ್ನಲಾಗಿದೆ. ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿರುವ ಪ್ರಸಾದ್​ರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗಿದ್ದು ತಿ.ನರಸೀಪುರದಿಂದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ತಮ್ಮ ಪುತ್ರ ಸುನೀಲ್​ಬೋಸ್ ಕಣಕ್ಕಿಳಿಸಲು ಮುಂದಾಗಿರುವ ಸಚಿವ ಡಾ.ಎಚ್.ಸಿ. ಮಹದೇವಪ್ಪಗೆ ಟಾಂಗ್ ನೀಡುವ ಲೆಕ್ಕಾಚಾರ ನಡೆಸಲಾಗಿದೆ ಎನ್ನಲಾಗಿದೆ. ವಿ.ಶ್ರೀನಿವಾಸ್ ಪ್ರಸಾದ್ ಅವರು ಜೆಡಿಎಸ್ ಪಕ್ಷಕ್ಕೆ ಸೇರುವ ಬಗ್ಗೆ ಈಗಾಗಲೇ ಜೆಡಿಎಸ್ ಮುಖಂಡರಾದ ಎಚ್.ವಿಶ್ವನಾಥ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಇನ್ನಿತರೆ ಸ್ಥಳೀಯ ನಾಯಕರು ಮಾತುಕತೆ ಆರಂಭಿಸಿದ್ದು, ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಕುಮಾರಸ್ವಾಮಿ ಈ ತಿಂಗಳು ಹಮ್ಮಿಕೊಂಡಿರುವ ಜಿಲ್ಲಾ ಪ್ರವಾಸ ವೇಳೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Edited By

Shruthi G

Reported By

Madhu shree

Comments