ಜೆಡಿಎಸ್ ನಲ್ಲಿ ಕುಮಾರಣ್ಣ 'ಕಿಂಗ್' ಆದ್ರು ಅಭಿಮಾನಿಗಳಿಗೆ ಮಾತ್ರ 'ಅಣ್ಣ'

16 Jan 2018 6:10 PM | Politics
3681 Report

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮೂರನೇ ಪುತ್ರ. ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿ ರಾಮನಗರದಿಂದ ಸ್ಪರ್ಧಿಸಲು ಸಿದ್ದರಾಗಿದ್ದಾರೆ. ಸಿನಿಮಾ ರಂಗದಲ್ಲಿ ಚಿತ್ರ ನಿರ್ಮಾಣ ಮಾಡಿಕೊಂಡಿದ್ದ ಕುಮಾರಸ್ವಾಮಿ ಅವರು ಅನುಭವವಿಲ್ಲದ ಕಾಲದಲ್ಲೇ ರಾಜಕೀಯ ಪ್ರವೇಶಿಸಿ ಹಲವು ಪ್ರಥಮಗಳಿಗೆ ನಾಂದಿ ಹಾಡಿದವರು. ಈಗ ತಂತ್ರಗಾರಿಕೆಯಲ್ಲಿ ನಿಷ್ಣಾತರಾಗಿರುವ ಕುಮಾರಸ್ವಾಮಿ ಅವರ ರಾಜಕೀಯ ಪಯಣ ಪರಿಚಯ ಇಲ್ಲಿದೆ.

ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗಗಳನ್ನು ಮೀರಿ ಈ ಬಾರಿ ಹೆಚ್ಚಿನ ಪ್ರಭಾವ ಬೀರುತ್ತಿದ್ದಾರೆ. ಮನೆ ಮನೆಗೆ ಕುಮಾರಣ್ಣ ಎಂಬ ಅಭಿಯಾನದ ಮೂಲಕ ತಮ್ಮ ಟ್ವೆಂಟಿ- ಟ್ವೆಂಟಿ  ಆಡಳಿತ ಅವಧಿಯ ಗ್ರಾಮ ವಾಸ್ತವ್ಯವನ್ನು ಮುಂದುವರೆಸಿದ್ದಾರೆ.ಒಂದು ಕಡೆ ಬಂಡಾಯ ಶಾಸಕರನ್ನು ಸಂಭಾಳಿಸುವುದು, ಮತ್ತೊಂದೆಡೆ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವುದರ ಬಗ್ಗೆ ಗೊಂದಲ, ಆಗಾಗ ಕೈ ಕೊಡುವ ದೇಹಾರೋಗ್ಯ, ಕಾರ್ಯಕರ್ತರನ್ನು ಸಂಘಟಿಸುವ ಚತುರತೆ ಎಲ್ಲದರ ನಡುವೆ ಅಪ್ಪಟ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಸಿಎಂ ಆಗಿ ನೋಡುವ ಕನಸು ಜೆಡಿಎಸ್ ಕಾರ್ಯಕರ್ತರಲ್ಲಿದೆ.

ರಾಜಕೀಯ ಪಯಣ:

  • 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
  • 1998ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು 1999ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು.
  • 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
  • ಫೆಬ್ರವರಿ 2006 ರಿಂದ ಅಕ್ಟೋಬರ್ 2007ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ. ಬಿಜೆಪಿ ಜತೆ ಟ್ವೆಂಟಿ- ಟ್ವೆಂಟಿ  ಸರ್ಕಾರ ಸ್ಥಾಪನೆ.
  • 2013 ರಲ್ಲಿ ರಾಮನಗರ ಕ್ಷೇತ್ರದಿಂದ ಅಸೆಂಬ್ಲಿಗೆ ಮರು ಆಯ್ಕೆ.
  • 2014 ಚಿಕ್ಕಬಳ್ಳಾಪುರದಲ್ಲಿ ಲೋಕಸಭೆಗೆ ಸ್ಪರ್ಧಿಸಿ, ವೀರಪ್ಪ ಮೊಯ್ಲಿ ವಿರುದ್ಧ ಸೋಲು ಕಂಡರು.
  • ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆ. ಹಾಲಿ ರಾಮನಗರ ಶಾಸಕ.

ಕುಟುಂಬ ವರ್ಗ ಪರಿಚಯ :

  • 16 ಡಿಸೆಂಬರ್ 1959ರಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನನ .
  • ರಾಮನಗರ ಇವರ ರಾಜಕೀಯ ಕಾರ್ಯಕ್ಷೇತ್ರ .
  • ಬಿಎಸ್ಸಿ ಪದವೀಧರ .
  • ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್.
  • ಎಚ್.ಡಿ.ಬಾಲಕೃಷ್ಣ, ಎಚ್.ಡಿ.ರೇವಣ್ಣ ಇಬ್ಬರು ಅಣ್ಣಂದಿರು.ಎಚ್.ಡಿ.ರಮೇಶ್ ತಮ್ಮ, ಇಬ್ಬರು ಸೋದರಿಯರು.

ಎಚ್ ಡಿಕೆ ಸಾಧನೆಗಳು :

  •  ಸಾರಾಯಿ ನಿಷೇಧ, ಲಾಟರಿ ನಿಷೇಧ,6 ಜಿಲ್ಲೆಗಳಿಗೆ 2689.64 ಕೋಟಿ ಪ್ಯಾಕೇಜ್ ನೀಡಿಕೆ .
  •  ಉದ್ಯಾನಗಳ ನಿರ್ವಹಣೆಗಾಗಿ ವಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನ ಸ್ಥಾಪನೆ.
  •  ಮೀನುಗಾರಿಕೆ ವೃತ್ತಿ ಮಾಡುವ ಮಹಿಳೆಯರಿಗೆ ಶೇ 4 ರಷ್ಟು ಬಡ್ಡಿದರದಲ್ಲಿ ಸಾಲ ನೀಡಿಕೆ.
  •  ಸುವರ್ಣ ಕಾಯಕ ಉದ್ಯೋಗ ಶಿಕ್ಷಣ ಯೋಜನೆಯಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ .
  •  ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಗೆ ಚಾಲನೆ.
  •  ರೈತರಿಗೆ ಒಟ್ಟಾರೆ 7000 ಕೋಟಿ ರು ಪ್ಯಾಕೇಜ್ ದೊರೆಯುವಂತೆ ಮಾಡಿದ್ದು ದೊಡ್ದ ಸಾಧನೆ.
  •  ಸುವರ್ಣ ಗ್ರಾಮೋದಯ ಯೋಜನೆ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ .
  •  ಕೋಲಾರ, ಬಿಜಾಪುರಕ್ಕೆ ಕುಡಿಯುವ ನೀರು ಪೂರೈಕೆಗೆ ಯೋಜನೆ ಘೋಷಣೆ.
  •  ಲ್ಯಾಂಡ್ ಮಾಫಿಯಾ ತಡೆಗೆ ಸೂಕ್ತ ಕ್ರಮ 40 ಸಾವಿರ ಎಕರೆ ಭೂಮಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
  •  ಕೈಗಾರಿಕೆ ಇತ್ತು ನೀಡಲು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಾಗಿದ್ದು ಎಚ್ಡಿಕೆ ಕಾಲದಲ್ಲೇ.
  •  ಉತ್ತರ ಕರ್ನಾಟಕದಲ್ಲಿ ವಿಶೇಷ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ.
  •  ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ ಯೋಜನೆ, ಆಸರೆ, ಅಮೃತ ಯೋಜನೆ ಅನುಷ್ಠಾನ.
  •  ಬೆಂಗಳೂರಿನ 190 ಕಿ.ಮೀ ರಸ್ತೆ ದುರಸ್ತಿ, ವಿಸ್ತರಣೆ ಕೈಗೊಳ್ಳಲಾಗಿದೆ.

    ಸಿಎಂ ಆಗುವ ಕನಸು ಹೊತ್ತಿರುವ ಎಚ್ ಡಿಕೆ :

ಆನಂದ್ ಆಸ್ನೋಟಿಕರ್ ಅವರನ್ನು ಜೆಡಿಎಸ್ ಗೆ ಸೇರಿಸಿಕೊಳ್ಳುವ ಮೂಲಕ ಕರಾವಳಿ ಭಾಗದಲ್ಲಿ ತನ್ನ ಛಾಪು ಮೂಡಿಸಲು ಯತ್ನಿಸುತ್ತಿದೆ. ಕೋನರೆಡ್ಡಿ ಅವರು ಮಹದಾಯಿ ಹೋರಾಟದಲ್ಲಿ ಸಕ್ರಿಯರಾಗಿದ್ದು, ಕುಮಾರಸ್ವಾಮಿ ಅವರ ಪ್ರಭಾವ ಈ ಬಾರಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿದೆ ಎಂಬ ವರದಿಗಳಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಒಂದಷ್ಟು ಸ್ಥಾನಗಳನ್ನು ಕಸಿದು, ಕಿಂಗ್ ಮೇಕರ್ ಆಗುವ ಗುರಿಯೂ ಇದ್ದೇ ಇದೆ. 151 ಕ್ಷೇತ್ರಗಳ ಮೇಲೆ ಮಾತ್ರ ಹೆಚ್ಚಿನ ಗಮನವನ್ನು ಹರಿಸಿರುವ ಎಚ್ಡಿಕೆ, ಜೆಡಿಎಸ್ ನ ಕಿಂಗ್, ಅಭಿಮಾನಿಗಳ ಪಾಲಿನ ಅಣ್ಣ.

Edited By

Shruthi G

Reported By

Shruthi G

Comments