ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್.ವಿಶ್ವನಾಥ್

11 Jan 2018 9:44 AM | Politics
309 Report

ಬಿಜೆಪಿ, ಆರೆಸ್ಸೆಸ್ ಉಗ್ರಗಾಮಿ ಸಂಘಟನೆಗಳೇ ಆಗಿದ್ದರೆ ನಿಮ್ಮ ಕೈಯಲ್ಲೇ ಅಧಿಕಾರ ಇದೆ. ಅದನ್ನು ಬಳಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ, ಆರೆಸ್ಸೆಸ್, ಉಗ್ರಗಾಮಿ ಸಂಘಟನೆಗಳು ಎಂದು ಹೇಳಿದ್ದಾರೆ. ಹಾಗಿದ್ದ ಮೇಲೆ ಅವರ ವಿರುದ್ಧ ಏಕೆ ಕ್ರಮ ಜರುಗಿಸುತ್ತಿಲ್ಲ?, ಮುಖ್ಯಮಂತ್ರಿಗಳ ಕೈಯಲ್ಲೇ ಅಧಿಕಾರ ಇದೆ. ಅದನ್ನು ಬಳಸುವ ಬದಲು 'ನಾನು ಸತ್ತಂತೆ ಮಾಡುತ್ತೇನೆ, ನೀನು ಅಳುವಂತೆ ಮಾಡು' ಎನ್ನುವಂತೆ ಎರಡೂ ರಾಷ್ಟ್ರೀಯ ಪಕ್ಷಗಳು ನಾಟಕವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ನಡೆದ ಕೋಮು ಗಲಭೆಯ ಬಗೆಗಿನ ಗಮನ ಬೇರೆಡೆಗೆ ಹರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ಗಲಭೆಯನ್ನು ನಿಯಂತ್ರಿಸಲು ಇವರಿಗೆ ಸಾಧ್ಯವಿಲ್ಲವೇ?. ಮಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಜಗದೀಶ್ ಕಾರಂತ್, ಮುತಾಲಿಕ್ ಬಹಿರಂಗವಾಗಿ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಏಕೆ ಇವರ ಮೇಲೆ ಕ್ರಮ ಜರುಗಿಸುತ್ತಿಲ್ಲ ಎಂದವರು ಪ್ರಶ್ನಿಸಿದರು.

ಜಗದೀಶ್ ಕಾರಂತ್ ಎಂಬ ವ್ಯಕ್ತಿ ಓರ್ವ ಮುಸ್ಲಿಂ ಸಬ್ ಇನ್ಸ್‍ಪೆಕ್ಟರ್ ವಿರುದ್ಧ ಬಹಿರಂಗವಾಗಿ ಆತನ ತಲೆ ಬೋಳಿಸಿ ಎಂದು ಹೇಳುತ್ತಾನೆ. ಮುತಾಲಿಕ್ ಗೋವಾಗೆ ಹೋಗಲು ಅಲ್ಲಿನ ಸರಕಾರ ಅನುಮತಿ ನೀಡುವುದಿಲ್ಲ. ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಆತನನ್ನು ಸೇರಿಸುವುದಿಲ್ಲ. ಅಂತಹದರಲ್ಲಿ ನಮ್ಮ ಸರಕಾರ ಏಕೆ ಇಂತಹವರ ಮೇಲೆ ಕ್ರಮ ಜರಗಿಸದೆ ಕೈಕಟ್ಟಿ ಕುಳಿತಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡೇ ಇಂತಹ ಕೆಲಸಗಳನ್ನು ಮಾಡಿಸುತ್ತಿವೆ ಎಂದು ಆರೋಪಿಸಿದರು.

Edited By

Shruthi G

Reported By

Shruthi G

Comments