ನಿಮ್ಮ ಸೇವೆಗೆ ಕೈ ಮುಗಿದು ಬೇಡುವೆ, ಮತ್ತೊಂದು ಬಾರಿ ಅವಕಾಶ ಕೊಡಿ : ಎಚ್ ಡಿಕೆ

08 Jan 2018 10:26 AM | Politics
399 Report

ಯಾವುದೇ ಅಧಿಕಾರ, ಅಹಂಕಾರದ ಲಾಲಸೆ ನನಗಿಲ್ಲ. ನೊಂದವರ ಕಣ್ಣೀರೊರೆಸಲು, ಬಡವರು, ರೈತರ ಆಶೋತ್ತರಗಳಿಗೆ ಸ್ಪಂದಿಸಲು ದಯವಿಟ್ಟು ಇದೊಂದು ಬಾರಿ ಜೆಡಿಎಸ್‍ಗೆ ಅವಕಾಶ ನೀಡಿ ಆಶೀರ್ವದಿಸಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮತದಾರರ ಎದುರು ಮನವಿ ಮಾಡಿದ್ದಾರೆ.

 ಕೇವಲ 20 ತಿಂಗಳು ನನ್ನ ಅಧಿಕಾರವಧಿ ಕಂಡಿರುವ ನಿಮಗೆ ಜೆಡಿಎಸ್ ಸಾಧನೆ, ಅಭ್ಯುದಯ ತಿಳಿದಿದೆ. ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದ ನನ್ನ ನಿಲುವಿನಲ್ಲಿ ಆ ಪಕ್ಷದ ಮುಖಂಡರ ಕುತಂತ್ರವಿತ್ತು. ಆದರೂ ನಮಗೆ ಎರಡು ಬಾರಿ ಶಿಕ್ಷೆ ನೀಡಿದ್ದೀರಿ. ಆದರೆ ಈ ಬಾರಿ ಅದನ್ನು ಯಾವುದೇ ಕಾರಣಕ್ಕೂ ಮರುಕಳಿಸಬೇಡಿ. ಜೆಡಿಎಸ್‍ನ ಪ್ರಣಾಳಿಕೆಯಲ್ಲಿರುವ ಮಹಾದಾಯಿ ವಿವಾದ ಪರಿಹಾರ, ರೈತರ ಸಂಪೂರ್ಣ ಸಾಲಮನ್ನಾ ಮುಂತಾದ ಮಹತ್ವದ ಸಂಗತಿಗಳನ್ನು ಗುರುತಿಸಿ ನಮಗೆ ಆದ್ಯತೆ ನೀಡುವಂತೆ ನಿಮ್ಮಲ್ಲಿ ಬೇಡಿಕೊಳ್ಳುವೆ ಎಂದರು. ಇಂದು ನಾಡಿನ ಅನೇಕ ಜ್ವಲಂತ ಸಮಸ್ಯೆಗಳು, ರೈತರ ಬವಣೆಗಳನ್ನು ನಿವಾರಿಸುವಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸಂಪೂರ್ಣ ವಿಫಲವಾಗಿದ್ದು, ಬಿಜೆಪಿ ಪರಿವರ್ತನಾ ಯಾತ್ರೆಯ ಮೂಲಕ ತನ್ನ ಪಾಪ ತೊಳೆಯಲು ಹೊರಟಿದ್ದರೆ, ಕಾಂಗ್ರೆಸ್ ಜನರ ದುಡ್ಡಿನಲ್ಲಿ ಸಾಧನಾ ಸಮಾವೇಶ ನಡೆಸುತ್ತಿರುವುದು ನಾಚಿಗೇಡಿನ ವಿಷಯ. ನೀವೆಲ್ಲಾ ವಿವೇಚನೆಯಿಂದ ಯೋಚಿಸಿ ಪರಸ್ಪರ ಜೈಲಿಗೆ ಕಳಿಸುವವರನ್ನು ಆಯ್ಕೆಗೊಳಿಸುವಿರೋ ಇಲ್ಲವೇ ನಿಮ್ಮೆಲ್ಲರ ಬವಣೆ, ಸಮಸ್ಯೆಗಳನ್ನು ನೀಗಿಸಿ ಉತ್ತಮ ಆಡಳಿತ ನೀಡುವವರಿಗೆ ಆದ್ಯತೆ ನೀಡುವಿರೋ? ತುಲನೆ ಮಾಡಿ ಆಯ್ಕೆ ಮಾಡಿರಿ. ನಿಮ್ಮ ನಿರೀಕ್ಷೆಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಆಲಿಸುವ ಸರಕಾರಕ್ಕೆ ಪ್ರಾಧಾನ್ಯತೆ ನೀಡಿರಿ ಎಂದು ಮತದಾರರಲ್ಲಿ ಕುಮಾರಸ್ವಾಮಿ ಕೋರಿದರು.

 

Edited By

Shruthi G

Reported By

Madhu shree

Comments