ಗೌರಿ ಲಂಕೇಶ್ ಹಂತಕರ ಸುಳಿವು ಸಿಕ್ಕಿದೆ : ಸಿಎಂ ಸಿದ್ದರಾಮಯ್ಯ

06 Jan 2018 3:25 PM | Politics
274 Report

ರಾಜ್ಯಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿದ್ದ ಹಿರಿಯ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಸಾಕ್ಷಾಧಾರಗಳೊಂದಿಗೆ ಬಹಿರಂಗಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‍ಐಟಿ) ಪ್ರಮುಖ ಆರೋಪಿಗಳು ಯಾರೆಂಬುದನ್ನು ಪತ್ತೆಹಚ್ಚಿದ್ದಾರೆ. ಸದ್ಯದಲ್ಲೇ ಎಲ್ಲವೂ ಬಹಿರಂಗವಾಗಲಿದೆ ಎಂದು ತಿಳಿಸಿದರು.

ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಲವಾರು ಅಪರಾಧಿ ಚಟುವಟಿಕೆಗಳಲ್ಲಿ ಭಾಗಯಾಗಿರುವ ಆರೋಪಿಗಳೇ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ಶಂಕೆಯಿದೆ ಎಂದರು. ವಿವಿಧ ಆಯಾಮಗಳಲ್ಲಿ ಎಸ್‍ಐಟಿ ತನಿಖೆ ನಡೆಸುತ್ತಿದ್ದು , ಆರೋಪಿಗಳ ಪೂರ್ವಾಪರ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದೆ. ಸದ್ಯದಲ್ಲೇ ಮಾಹಿತಿ ಬಹಿರಂಗವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಆರ್‍ಎಸ್‍ಎಸ್ ಸಂಘಟನೆಯನ್ನು ನಿಷೇಧ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದೇನೆ ಎಂದ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಶ್ರೀರಾಮಸೇನೆ, ಭಜರಂಗದಳ, ವಿಎಚ್‍ಪಿ, ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿ ಸೇರಿದಂತೆ ಯಾವುದೇ ಸಂಘಟನೆಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಸಮಾಜದ ಕೋಮುಸೌಹಾರ್ದವನ್ನು ಹಾಳುಗೆಡವಿದರೆ ಸರ್ಕಾರ ಕೈಕಟ್ಟಿ ಕೂರಲಿದೆಯೇ ಎಂದು ಪ್ರಶ್ನಿಸಿದರು. ಅಷ್ಟಕ್ಕೂ ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಅಧಿಕಾರವಿರುವುದು ಕೇಂದ್ರ ಸರ್ಕಾರಕ್ಕೆ. ನಾವು ಅಗತ್ಯವಿದ್ದರೆ ಕೆಲವು ಸಂಘಟನೆಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸು ಮಾಡಲು ಸಿದ್ದರಿದ್ದೇವೆ. ಯಾರೇ ಕಾನೂನನ್ನು ಕೈಗೆತ್ತಿಕೊಂಡರೆ ಕಾನೂನಿನ ಪ್ರಕಾರವೇ ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು. ಈ ವೇಳೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ , ವಿಧಾನಪರಿಷತ್ ಸದಸ್ಯ ಪ್ರಸನ್ನಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By

Shruthi G

Reported By

Madhu shree

Comments