ಜೆಡಿಎಸ್ ಪರವಾಗಿ ಪ್ರಚಾರ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಸೂಲಿಬೆಲೆ ಪ್ರತಿಕ್ರಿಯೆ ..!!

03 Jan 2018 6:07 PM | Politics
11782 Report

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಿರ್ದಿಷ್ಟ ಚಿಂತನೆಯ ಹಾಗೂ ಆಲೋಚನೆಯವರು ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಲಿಬೆಲೆ ಬದಲಾಗಿದ್ದಾರೆ ಹಾಗೂ ದುಡ್ಡಿಗೆ ಮಾರಾಟ ಆಗಿದ್ದಾರೆ ಎಂಬುದು ಆಕ್ಷೇಪ. ಜತೆಗೆ ಕೇಂದ್ರದಲ್ಲಿ ಕೌಶಲಾಭಿವೃದ್ಧಿ ಖಾತೆಯ ರಾಜ್ಯ ಸಚಿವರೂ ಆಗಿರುವ, ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರನ್ನು ಗುರಿ ಮಾಡಿಕೊಂಡು ಇಂಥದ್ದೊಂದು ಲೇಖನ ಹಾಗೂ ಹೇಳಿಕೆಯನ್ನು ಚಕ್ರವರ್ತಿ ಸೂಲಿಬೆಲೆ ಮಾಡಿದ್ದಾರೆ ಎಂಬುದು ಕೂಡ ಮತ್ತೊಂದು ಆಕ್ಷೇಪ.

ಅಸಲಿಗೆ ಆಗಿದ್ದೇನು ಎಂಬುದರ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ. ಐದು- ಐದು ಬಾರಿ ಗೆದ್ದರೂ ತಮ್ಮ ಕ್ಷೇತ್ರಕ್ಕೆ ಐದು ಪೈಸೆ ಉಪಯೋಗವಿಲ್ಲ ಅಂತ ನಾನು ಬರೆದಿದ್ದು ವಿಜಯವಾಣಿಯ ಅಂಕಣದಲ್ಲಿ. ಅದು ಯಾರೆಲ್ಲ ಕೆಲಸ ಮಾಡಿಲ್ಲವೋ ಅವರೆಲ್ಲರಿಗೂ ಅನ್ವಯಿಸಿ ಬರೆದದ್ದು. ಅದು ನಿಮಗೆ ತಾಗುತ್ತದೆ ಅಂದರೆ ನಾನೇನು ಮಾಡಲಿ? ಯಾರಿಗೆಲ್ಲ ತಾಗುತ್ತದೋ ತಾಗಲಿ ಎಂದು ಸುಮ್ಮನಾದೆ. ಸಮೀಕ್ಷೆಗಳು ಹಾಗೂ ಪಕ್ಷದಲ್ಲಿ ಗುಜರಾತ್ ನಲ್ಲಿ ಬಿಜೆಪಿ ಭಾರೀ ಬಹುಮತ ಗಳಿಸುತ್ತದೆ ಎನ್ನುತ್ತಿದ್ದರು. ಆದರೆ ಅಲ್ಲಿ ಆಡಳಿತ ವಿರೋಧಿ ಅಲೆ ಇದ್ದದ್ದು ನಿಜ. ಇನ್ನು ನರೇಂದ್ರ ಮೋದಿಯವರನ್ನು ತುಂಬ ವರ್ಷದಿಂದ ನೋಡಿಕೊಂಡು ಬಂದಿದ್ದೀನಿ. ಅವರ ಚುನಾವಣಾ ಭಾಷಣಗಳನ್ನು ಉತ್ತರಪ್ರದೇಶ, ದೆಹಲಿ, ಬಿಹಾರ...ಇಲ್ಲೆಲ್ಲ ಹತ್ತಿರದಿಂದ ಗಮನಿಸಿದ್ದೀನಿ.

ಗೆಲುವು ಸುಲಭ ಎಂಬ ವಾತಾವರಣದಲ್ಲಿ ಮೋದಿ ಅವರ ಭಾಷಣದ ವೈಖರಿಯೇ ಬೇರೆ. ಹಾಗಲ್ಲದ ವೇಳೆಯಲ್ಲಿನ ವೈಖರಿಯೇ ಬೇರೆ. ಎರಡನೇ ಹಂತದ ಚುನಾವಣಾ ಪ್ರಚಾರದ ಕೊನೆಗೆ ಮೋದಿ ಅವರು ಅಂಥ ಆಕ್ರಮಣಕಾರಿಯಾಗಿ ಮಾತಿಗೆ ಇಳಿಯದಿದ್ದರೆ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದೇ ಕಷ್ಟವಿತ್ತು. ಅಲ್ಲಿನ ಪ್ರಯಾಸದ ಗೆಲುವು ಮೋದಿ ಅವರ ಶ್ರಮದಿಂದಲೇ ಅಂತ ನಾನು ಬರೆದಿದ್ದೆ. ಫಲಿತಾಂಶದ ನಂತರ ಅನೇಕರು ಫೋನ್ ಮಾಡಿ, ನಿಮ್ಮ ಮಾತು ಸರಿ ಅಂದರು. ಅಭಿವೃದ್ಧಿ, ಏಳ್ಗೆ ಬಗ್ಗೆ ಮಾತನಾಡುವ ಎಲ್ಲ ಪಕ್ಷ ಹಾಗೂ ರಾಜಕಾರಣಿಯ ಹಿಂದೆ ನಾವಿರುತ್ತೀವಿ. ಮೋದಿ ಅವರ ಬಗ್ಗೆ ಕೂಡ ನಮ್ಮ ಆಕ್ಷೇಪ ಇದೆ. ಗುಜರಾತ್ ನಲ್ಲಿ ವಿಕಾಸ- ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕಕ್ಕೆ ಬಂದರೆ ಆ ಮಾತೇ ಇಲ್ಲ. ನನ್ನ ಕನಸಿನ ಕರ್ನಾಟಕ ಎಂಬುದನ್ನು ಯುವ ಬ್ರಿಗೇಡ್ ಶುರು ಮಾಡಿದಾಗ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.  ಇಂಥ ಆರೋಪಗಳನ್ನು ಯಾರು, ಏಕೆ ಮಾಡುತ್ತಾರೆ ಎಂಬುದನ್ನು ಜನರು ಬಹಳ ಬೇಗ ನಿರ್ಧಾರ ಮಾಡುತ್ತಾರೆ. ನಾನು ಯಾವುದೋ ಒಂದು ನಿರ್ದಿಷ್ಟ ಪಕ್ಷದ ವಕ್ತಾರನಲ್ಲ ಎಂಬುದನ್ನು ಇಂಥ ಆರೋಪಗಳು ಪದೇ ಪದೇ ಸಾಬೀತುಪಡಿಸುತ್ತವೆ. ಈಗಿನ ಗಲಾಟೆಯಂಥದ್ದು ನನಗೆ ಹೊಸದಲ್ಲ. ಸೋಷಿಯಲ್ ಮೀಡಿಯಾಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಿಷ್ಪಕ್ಷಪಾತವಾಗಿ, ನಿಸ್ವಾರ್ಥವಾಗಿ ಮತ್ತು ಪ್ರಾಮಾಣಿಕವಾಗಿ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ. ಇನ್ನೊಂದು ಮಾತು ಗೊತ್ತಾ? ಇವೆಲ್ಲ ಆರೋಪ- ಆಕ್ಷೇಪದ ಮಧ್ಯೆಯೇ ನಮ್ಮ ಮೇಲೆ ವಿಶ್ವಾಸ ಹೆಚ್ಚಾಗುತ್ತದೆ ಎಂದರು .

Edited By

Shruthi G

Reported By

Madhu shree

Comments