ಯೋಗೀಶ್ವರ್ ಮಣಿಸಲು ದೇವೇಗೌಡರ ಕುಟುಂಬದ ಜತೆ 'ಕೈ' ಮಿಲಾಯಿಸಿದ್ರಾ ಡಿಕೆಶಿ ..?

03 Jan 2018 3:57 PM | Politics
483 Report

ಚುನಾವಣೆಗೊಂದು ಪಕ್ಷ ಬದಲಿಸುತ್ತಾ, ಅದನ್ನೇ ರಾಜಕೀಯ ಏಳ್ಗೆಗೆ ಸೋಪಾನ ಮಾಡಿಕೊಂಡಿರುವ ಯೋಗೀಶ್ವರ್ ತಂತ್ರಗಾರಿಕೆಯನ್ನೇ ಅವರಿಗೆ ಮುಳುಗು ನೀರು ಮಾಡಲು ಡಿ.ಕೆ. ಸಹೋದರರು ಪ್ರತಿತಂತ್ರ ಹೆಣೆದಿದ್ದು, ತಮ್ಮ ಕಡುವಿರೋಧಿ ಬಗ್ಗುಬಡಿಯಲು ಮತ್ತೊಬ್ಬ ಕಡುವಿರೋಧಿ ದೇವೇಗೌಡರ ಕುಟುಂಬದ ಜತೆ 'ಕೈ' ಮಿಲಾಯಿಸಿದ್ದಾರೆ.

ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಆಗಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನೇ ಬೆಂಬಲಿಸುವ ಮೂಲಕ ಯೋಗೀಶ್ವರ್ ಮಣಿಸಲು ಡಿಕೆ ಸಹೋದರರು ನಿರ್ಧರಿಸಿದ್ದಾರೆ. 'ಅನಿತಾ ತಮ್ಮ ಸಹೋದರಿ ಇದ್ದಂತೆ, ಎಷ್ಟು ಬೇಕಾದರೂ ಬೆಟ್ ಕಟ್ಟುತ್ತೇನೆ. ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ' ಎಂದು ಶಿವಕುಮಾರ್ ನೀಡಿರುವ ಹೇಳಿಕೆ ಹಿಂದೆ ಈ ನಿರ್ಧಾರ ಅಡಗಿದೆ. ಯೋಗೀಶ್ವರ್ ಕೂಡ ಅಷ್ಟೇ, 'ಡಿಕೆ ಸಹೋದರರ ಬೇಳೆ ಚನ್ನಪಟ್ಟಣದಲ್ಲಿ ಬೇಯೋದಿಲ್ಲ. ಕಾರ್ಯಕ್ರಮವೊಂದರಲ್ಲಿ ದೇವೇಗೌಡರ ಪಾದಕ್ಕೆ ಎರಗಿದ್ದು, ಕಾವೇರಿ ವಿವಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೌಡರ ಮನೆಗೆ ಹೋಗುವಂತೆ ಮಾಡಿದ್ದು, ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಕುಮಾರಸ್ವಾಮಿ ಅವರನ್ನು ಬೇಟಿ ಮಾಡಿದ್ದು, ಎಲ್ಲಕ್ಕಿಂತ ಮಿಗಿಲಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿರುವ ಅನಿತಾ ಅವರನ್ನು ಸಹೋದರಿ, ಅವರಿಗೆ ಚುನಾವಣೆಯಲ್ಲಿ ಎಲ್ಲ ರೀತಿಯ ನೆರವು ನೀಡುವುದಾಗಿ ಬಹಿರಂಗವಾಗಿಯೇ ಹೇಳಿದ್ದು ಗೌಡರ ಕುಟುಂಬದ ಬಗ್ಗೆ ಶಿವಕುಮಾರ್ ದೃಷ್ಟಿಕೋನ ಬದಲಾಗಿರುವುದರ ಸಂಕೇತ.

ಚನ್ನಪಟ್ಟಣದಲ್ಲಿ ಸುಮಾರು 2.10 ಲಕ್ಷ ಮತದಾರರಿದ್ದು, ಯೋಗೀಶ್ವರ್ ಇಲ್ಲಿ ಪಾರುಪತ್ಯೆ ಸ್ಧಾಪಿಸಿದ ನಂತರ ಅವರಿಗೆ 55 ರಿಂದ 60 ಸಾವಿರ, ಜೆಡಿಎಸ್ ಗೆ 52 ರಿಂದ 60 ಸಾವಿರ, ಕಾಂಗ್ರೆಸ್ ಗೆ 15 ಸಾವಿರ, ಬಿಜೆಪಿಗೆ ಐದಾರು ಸಾವಿರ ಮತಗಳು ಬೀಳುತ್ತಿವೆ. ಯೋಗೀಶ್ವರ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ. ಕಾಂಗ್ರೆಸ್ ಮತಗಳು ನಿರ್ಣಾಯಕ. ಸುಮಾರು 30 ಸಾವಿರ ಮತಗಳನ್ನು ಸೆಳೆಯುವ ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅಧವಾ ಸಾರಾಸಗಟು ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಬೀಳುವಂತೆ ನೋಡಿಕೊಳ್ಳುವುದು ಸದ್ಯಕ್ಕೆ ಶಿವಕುಮಾರ್ ಮುಂದಿರುವ ಆಯ್ಕೆಗಳು.  ಯೋಗೀಶ್ವರ್ ಬಿಜೆಪಿ ಸೇರಿರುವುದರಿಂದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಅಥವಾ ಜೆಡಿಎಸ್ ಪಾಲಾಗುತ್ತವೆ. ಇವನ್ನು ಅನಿತಾ ಕುಮಾರಸ್ವಾಮಿ ಪರ ಕ್ರೋಡೀಕರಿಸುವ ಚಿಂತನೆಯೂ ಅವರಲ್ಲಿದೆ. ಮೊದಲಿಂದಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ಥಳೀಯ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಯೋಗೀಶ್ವರ್ ಈ ಬಾರಿ ಮಾಡಬಹುದಾದ ಒಳತಂತ್ರಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.

Edited By

venki swamy

Reported By

Madhu shree

Comments