ಸಿದ್ದರಾಮಯ್ಯ ಸರಕಾರದಿಂದ ರೈತರಿಗೆ ಆತ್ಮಹತ್ಯೆ ಭಾಗ್ಯ : ಎಚ್ ಡಿಕೆ

29 Dec 2017 9:35 AM | Politics
288 Report

 ರಾಜ್ಯದಲ್ಲಿ ರೈತರ ಸಾಲ ಮನ್ನಾ ಯೋಜನೆ ಘೋಷಣೆಯ ಬಳಿಕವೂ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಸಿದ್ದರಾಮಯ್ಯ ಸರಕಾರ ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರ 8,000 ಕೋಟಿ ರೂ. ಸಾಲ ಮನ್ನಾ ಮಾಡಿ ಜೂನ್ 28ಕ್ಕೆ ಆದೇಶ ಹೊರಡಿಸಲಾಗಿತ್ತು. ಆದರೆ, ಈವರೆಗೂ ಯಾವೊಬ್ಬ ರೈತನಿಗೂ ಸರಕಾರದಿಂದ ನಯಾ ಪೈಸೆ ಸಿಕ್ಕಿಲ್ಲ. ಸಾಲ ಮನ್ನಾ ಘೋಷಣೆ ಮಾಡಿದ ಬಳಿಕದ ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 450 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರದ ಸಾಲ ಮನ್ನಾ ಯೋಜನೆ ರೈತರಿಗೆ ಇನ್ನೂ ತಲುಪಿಲ್ಲ. ಇದೊಂದು ಬೋಗಸ್ ಕಾರ್ಯಕ್ರಮ ಎಂದು ಕುಮಾರಸ್ವಾಮಿ ಹೇಳಿದರು.ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 3,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಅನ್ನಭಾಗ್ಯ, ಕೃಷಿ ಭಾಗ್ಯ, ಸಾಲ ಮನ್ನಾ ಮೊದಲಾದ ಯೋಜನೆಗಳ ಹೊರತಾಗಿಯೂ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರು ಉತ್ತರ ನೀಡಬೇಕೆಂದರು.

ಕಾನೂನು ಸುವ್ಯವಸ್ಥೆ ಕುಸಿದಿದೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯದ ಕೆಲವೆಡೆಗಳಲ್ಲಿ ಸಣ್ಣ ಪುಟ್ಟ ಘರ್ಷಣೆಗಳೂ ಕೋಮು ಬಣ್ಣ ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ಹೊನ್ನಾವರದಲ್ಲಿ ನಡೆದ ಆಟೊ ರಿಕ್ಷಾ-ಬೈಕ್ ಚಾಲಕನ ನಡುವಿನ ಅಪಘಾತಕ್ಕೆ ಸಂಬಂಧಿಸಿ ಕೋಮು ಘಷರ್ಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಕುಮಾರ ಸ್ವಾಮಿ ಹೇಳಿದರು. ದ.ಕ. ಜಿಲ್ಲೆಯಲ್ಲಿ ಪದೇ ಪದೇ ಮರುಕಳುಸುತ್ತಿರುವ ಘರ್ಷಣೆಗಳಿಗೆ ಏನು ಕಾರಣ ಎಂಬುದು ಸರಕಾರಕ್ಕೆ ಈವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಕೆಲವೊಂದು ಘರ್ಷಣೆಗಳು ಕೋಮು ಬಣ್ಣ ಪಡೆದುಕೊಳ್ಳುತ್ತಿವೆ. ಅಮಾಯಕರು ಬಲಯಾಗುತ್ತಿದ್ದಾರೆ. ಯಾವುದೇ ದುಷ್ಕೃತ್ಯ ನಡೆದರೂ ಅದು ವೈಯಕ್ತಿಕ ವಾಗಿ ನಡೆದಿದೆಯೇ ಅಥವಾ ಕೋಮು ದ್ವೇಷದಿಂದ ಆಗಿದೆಯೇ ಎಂಬುದರ ಬಗ್ಗೆ ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

 

Edited By

Shruthi G

Reported By

Madhu shree

Comments