ವಿವಿಧ ಸಮುದಾಯಗಳ ವಿಶ್ವಾಸ ಗಳಿಸಲು ಮುಂದಾದ ಜೆಡಿಎಸ್

26 Dec 2017 1:12 PM | Politics
343 Report

2018ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಹೊಂದಿರುವ ಜೆಡಿಎಸ್ ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಸಮುದಾಯ ಆಧಾರಿತ ಸಮಾವೇಶಗಳನ್ನು ನಡೆಸುತ್ತಾ ಬಂದಿದೆ.

ಈಗಾಗಲೇ ಮಹಿಳಾ ಸಮಾವೇಶ, ಅಲ್ಪಸಂಖ್ಯಾತರ ಸಮಾವೇಶ, ದಲಿತರ ಸಮಾವೇಶ, ಕುಂಬಾರರ ಸಮಾವೇಶಗಳನ್ನು ನಡೆಸಿರುವ ಜೆಡಿಎಸ್ ಹಿಂದುಳಿದ ವರ್ಗದ ಸಮಾವೇಶ, ರೈತರ ಸಮಾವೇಶಗಳನ್ನು ನಡೆಸಲು ಉದ್ದೇಶಿಸಿದೆ. ಚಿಕ್ಕಬಳ್ಳಾಪುರದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಜೆಡಿಎಸ್ ಮೂಲಗಳ ಪ್ರಕಾರ ಮುಂದಿನ ತಿಂಗಳು ಹಿಂದುಳಿದ ವರ್ಗಗಳ ಸಮಾವೇಶ ನಡೆಸಲಾಗುವುದು. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ವಿವಿಧ ಸಮುದಾಯಗಳ ಓಲೈಕೆ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಅದೇ ರೀತಿ ವಿಜಯಪುರದಲ್ಲಿ ಬೃಹತ್ ರೈತರ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ. ರೈತರು ಎದುರಿಸುತ್ತಿರು ಸಾಲಬಾಧೆ, ಬೆಲೆಕುಸಿತ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚೆ ಮಾಡುವ ಮೂಲಕ ರೈತರ ವಿಶ್ವಾಸ ಗಳಿಸುವುದು ಜೆಡಿಎಸ್‍ನ ಉದ್ದೇಶವಾಗಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಘೋಷಣೆಯನ್ನು ಜೆಡಿಎಸ್ ಪದೇ ಪದೇ ಪುನರುಚ್ಚರಿಸುತ್ತಾ ಬಂದಿದೆ. ತುಮಕೂರಿನಲ್ಲಿ ನಡೆಸಿದಂತೆ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಮತ್ತೊಂದು ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದೆ.

ಸಮಾವೇಶಗಳನ್ನು ನಡೆಸುವ ಮೂಲಕ ಆಯಾವರ್ಗದ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಗಮನ ಸೆಳೆದು ಮುಂದೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯೊಂದಿಗೆ ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ದಲಿತ ನಾಯಕರೊಂದಿಗೆ ಸಂವಾದ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆ ಸಮುದಾಯಕ್ಕೆ ನೀಡಬೇಕಾಗಿರುವ ಆದ್ಯತೆಗಳ ಮಾಹಿತಿಯನ್ನು ಪಡೆದುಕೊಂಡರು. ಮುಂದಿನ ತಿಂಗಳು ಜೆಡಿಎಸ್ ವರಿಷ್ಠರ ಪ್ರವಾಸದ ಜೊತೆ ಜೊತೆಯಲ್ಲಿಯೇ ಬಾಕಿ ಉಳಿದಿರುವ ಸಮಾವೇಶಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Edited By

Shruthi G

Reported By

Madhu shree

Comments