ಮೈಸೂರಿನಲ್ಲಿ ಕಾಂಗ್ರೆಸ್‌ ಗೆ ಸೆಡ್ಡು ಹೊಡೆಯಲು ಜೆಡಿಎಸ್‌ ನಿಂದ ಮಾಸ್ಟರ್ ಪ್ಲಾನ್

26 Dec 2017 12:55 PM | Politics
14951 Report

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಸ್ಪರ್ಧೆಯೊಡ್ಡಲು ಜೆಡಿಎಸ್‌ ನಿರ್ಧರಿಸಿದೆ.

ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಚಾಮುಂಡೇಶ್ವರಿ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆಗಿಳಿಯಲಿರುವ ವರುಣಾ ವಿಧಾನಸಭೆ ಕ್ಷೇತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಮೈಸೂರು ಜಿಲ್ಲೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ.ಇದಕ್ಕಾಗಿ ಸಂಕ್ರಾಂತಿ ನಂತರ ಸತತ ಮೂರು ತಿಂಗಳ ಕಾಲ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಂಗಳಲ್ಲಿ ಒಂದು ವಾರ ಮೈಸೂರಿನಲ್ಲೇ ಮೊಕ್ಕಾಂ ಹೂಡಲಿದ್ದಾರೆ.

ಮೈಸೂರು ವ್ಯಾಪ್ತಿಗೆ ಸೇರಿದ ಚಾಮುಂಡೇಶ್ವರಿ, ವರುಣಾ, ಕೆ.ಆರ್‌.ನಗರ, ಹುಣಸೂರು, ಪಿರಿಯಾಪಟ್ಟಣ, ಟಿ.ನರಸೀಪುರ, ಎಚ್‌.ಡಿ.ಕೋಟೆ, ನಂಜನಗೂಡು, ಚಾಮರಾಜ, ನರಸಿಂಹರಾಜ, ಕೃಷ್ಣರಾಜ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಸಲುವಾಗಿಯೇ ಮುಂದಿನ ವಾರ ಮೂರು ದಿನ ಕ್ಷೇತ್ರವಾರು ನಿರಂತರ ಸಭೆಯನ್ನು ಜೆಡಿಎಸ್‌ ಆಯೋಜಿಸಿದೆ.

ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ.ಟಿ.ದೇವೇಗೌಡ, ಕೆ.ಆರ್‌.ನಗರಕ್ಕೆ ಸಾ.ರಾ.ಮಹೇಶ್‌, ಹುಣಸೂರು ಕ್ಷೇತ್ರಕ್ಕೆ ಎಚ್‌.ವಿಶ್ವನಾಥ್‌, ಪಿರಿಯಾಪಟ್ಟಣಕ್ಕೆ ಮಹದೇವ್‌, ಚಾಮರಾಜಕ್ಕೆ ಪ್ರೊ.ರಂಗಪ್ಪ, ನರಸಿಂಹರಾಜಕ್ಕೆ ಸಂದೇಶ್‌ಸ್ವಾಮಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು ಉಳಿದ ಕ್ಷೇತ್ರಗಳಿಗೆ ಜನವರಿ ಮಾಸಾಂತ್ಯದ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿ ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಆ ಭಾಗದಲ್ಲಿ ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯದ ಮತಗಳ ಕ್ರೊಢೀಕರಣಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವುದು ನಮ್ಮ ಗುರಿ. ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರಗಳಂತೂ ಜೆಡಿಎಸ್‌ಗೆ ಪ್ರತಿಷ್ಠೆಯಾಗಿದೆ. ಎರಡೂ ಕಡೆ ಗೆಲ್ಲಲು ನಮ್ಮೆಲ್ಲಾ ಶಕ್ತಿ ಧಾರೆ ಎರೆದು ಏನೆಲ್ಲಾ ತಂತ್ರಗಾರಿಕೆ ರೂಪಿಸಬೇಕೋ ಅದನ್ನೆಲ್ಲಾ ಮಾಡುತ್ತೇವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು . 

Edited By

Shruthi G

Reported By

Shruthi G

Comments