ಅವಹೇಳನಕಾರಿ ಹೇಳಿಕೆ ನೀಡಿರುವ ಹೆಗಡೆಯವರನ್ನು ಸಂಪುಟದಿಂದ ಕೈಬಿಡಲು ಜೆಡಿಎಸ್ ನಿಂದ ಆಗ್ರಹ

26 Dec 2017 12:28 PM | Politics
334 Report

ಜಾತ್ಯತೀತವಾದಿಗಳು, ವಿಚಾರವಾದಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಹಾಗೂ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಸ್ತುವಾರಿಗಳಾದ ಡಾ.ಇಂತಿಯಾಜ್ ಅಹಮದ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಡಾ.ಇಂತಿಯಾಜ್ ಅಹಮದ್‍ರವರು ಜಾತ್ಯತೀತರಿಗೆ ಅಪ್ಪ-ಅಮ್ಮಂದಿರ ಅರ್ಥ ಏನೆಂಬುದು ತಿಳಿದಿರುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ದೇಶದ ಸಂಸ್ಕೃತಿ ಬಗ್ಗೆ ಅರಿವಿಲ್ಲದವರು ಇಂತಹ ಹೇಳಿಕೆ ನೀಡಿದ್ದಾರೆ. ಅಲ್ಲದೆ ಸಂವಿಧಾನವನ್ನು ಬದಲಿಸುವುದಕ್ಕೆ ನಾವು ಬಂದಿರುವುದು ಎಂದು ಹೇಳಿರುವ ಇವರನ್ನು ಪ್ರಧಾನಿ ಮೋದಿಯವರು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ದೇಶ ವಿವಿಧ ಜಾತಿ, ಧರ್ಮಗಳನ್ನು ಒಳಗೊಂಡಿದೆ. ವಿವಿಧತೆಯಲ್ಲಿ ಏಕತೆಯನ್ನೊಳಗೊಂಡ ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಮೂಲ ಆಧಾರ. ಇದನ್ನೇ ಬದಲಾಯಿಸಲು ಹೊರಟಿದ್ದಾರೆ. ಇದು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ. ಕೂಡಲೇ ಅವರು ದೇಶದ ಜನರ ಕ್ಷಮೆ ಯಾಚಿಸಬೇಕು. ಇವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕೆಂದು ಡಾ.ಇಂತಿಯಾಜ್ ಅಹಮದ್ ಒತ್ತಾಯಿಸಿದರು.ಅನಂತಕುಮಾರ್ ಹೆಗಡೆ ಅವರಿಗೆ ಕೇಂದ್ರ ಸರ್ಕಾರ ಜವಬ್ದಾರಿಯುತ ಸಚಿವ ಸ್ಥಾನ ನೀಡಿ ಜನರ ಆಶೋತ್ತರಗಳಿಗೆ ಸ್ಪಂಧಿಸುವ ಸಲುವಾಗಿಯೇ ಹೊರತು ಜನಸಾಮಾನ್ಯರನ್ನು ಹೀಯ್ಯಾಳಿಸಿ ಮಾತನಾಡಲು ಅಲ್ಲ, ಇಂತಹ ಸಚಿವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಆಗಿದ್ದು, ಕೂಡಲೇ ಇವರನ್ನು ಸಂಪುಟದಿಂದ ಕೈಬಿಡಬೇಕು ಎಂದರು.

ಅನಂತಕುಮಾರ್ ಕೂಡಲೇ ತಮ್ಮ ತಪ್ಪನ್ನು ಅರಿತು ದೇಶದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.ನಮ್ಮ ರಾಜ್ಯದ ನಾಡಗೀತೆ, ನಮ್ಮ ದೇಶದ ರಾಷ್ಟ್ರಗೀತೆ, ನಮ್ಮ ಸಂವಿಧಾನ ಇದು ಎಲ್ಲವೂ ಜಾತ್ಯಾತೀತ ತತ್ವಗಳ ಬುನಾದಿ ಎಂಬುದು ಅನಂತಕುಮಾರ್ ಹೆಗಡೆಯವರಿಗೆ ತಿಳಿದಿಲ್ಲವೇ.? ನಾಡಗೀತೆ, ರಾಷ್ಟ್ರಗೀತೆ ಹಾಗೂ ಸಂವಿಧಾನಕ್ಕೆ ಬದ್ಧರಾಗಿ ಆಡಳಿತ ಮಾಡಬೇಕೆಂಬುದು ಪ್ರತಿಯೊಬ್ಬರಿಗೆ ಗೊತ್ತಿರುವ ಸಂಗತಿ, ಈ ತತ್ವ ಅನಂತಕುಮಾರ್ ಹೆಗಡೆಯವರಿಗೆ ಗೊತ್ತಿಲ್ಲದಿದ್ದರೆ ಅವರನ್ನು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಇಟ್ಟುಕೊಂಡಿರುವುದು ನಮ್ಮದೇಶದ ದೌರ್ಭಾಗ್ಯ ಎಂದು ಡಾ.ಇಂತಿಯಾಜ್ ಅಹಮದ್ ರವರು ವಿಷಾಧ ವ್ಯಕ್ತಪಡಿಸಿದ್ದಾರೆ.

Edited By

Shruthi G

Reported By

Shruthi G

Comments