ಬಿಜೆಪಿಯವರು ಉತ್ತರ ಕರ್ನಾಟಕದವರಿಗೆ ಕಿವಿಗೆ ಹೂವು ಮೂಡಿಸುತ್ತಿದ್ದಾರೆ : ಎಚ್ ಡಿಕೆ

22 Dec 2017 10:17 AM | Politics
349 Report

ಕಳೆದ ಮೂವತ್ತು ವರ್ಷಗಳಿಂದ ಮಹದಾಯಿ ವಿಚಾರದಲ್ಲಿ ಮಾತುಕತೆ ನಡೆಯುತ್ತಲೇ ಇದೆ. ಮಾತುಕತೆಗೆ ಸಿದ್ಧ ಎಂದು ಹೇಳುವ ಮೂಲಕ ಬಿಜೆಪಿಯವರು ಉತ್ತರ ಕರ್ನಾಟಕ ಬಾಗದವರ ಕಿವಿಗೆ ಹೂವು ಮುಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

 ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಉತ್ತರ ಕರ್ನಾಟಕ ಭಾಗದ ಜನರಿಗೆ ಟೋಪಿ ಹಾಕಬೇಡಿ ಯಡಿಯೂರಪ್ಪನವರೇ. ನಿಮ್ಮ ಪಕ್ಷಕ್ಕೆ ನಿಜವಾದ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆ 7.5 ಟಿಎಂಸಿ ನೀರು ಬಳಕೆಗೆ ಆದೇಶ ಹೊರಡಿಸಲಿ. ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಒಪ್ಪಿಗೆ ಕೊಡಿಸಲಿ ಎಂದು ಆಗ್ರಹಿಸಿದ್ದಾರೆ.

ಮನೋಹರ ಪರಿಕ್ಕರ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದರೆ ಅದು ಅಧಿಕೃತ ಆಗುವುದಿಲ್ಲ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಬಳಿ ನಿಯೋಗ ಕೊಂಡೊಯ್ದಿದ್ದಾರೆ. ನಾನೂ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಆಗೆಲ್ಲಾ ಸುಮ್ಮನಿದ್ದ ಗೋವಾ ಮುಖ್ಯಮಂತ್ರಿ ಇದೀಗ ನಿನ್ನೆ ಯಡಿಯೂರಪ್ಪ ಪತ್ರ ಬರೆದರು ಎಂದು ಪ್ರತಿಯಾಗಿ ಪತ್ರ ಬರೆದು ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ಅಂದುಕೊಂಡರೆ ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪರಿವರ್ತನಾ ಯಾತ್ರೆಗೆ ವಿರೋಧ ವ್ಯಕ್ತವಾಗಬಾರದು ಎಂಬ ಕಾರಣಕ್ಕೆ ಪರಿಕ್ಕರ್‌ ಪತ್ರ ಮುಂದಿಟ್ಟು ಬಿಜೆಪಿಯವರು ಯಾಮಾರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

 

Edited By

venki swamy

Reported By

Madhu shree

Comments