ಜೆಡಿಎಸ್‌ನ ಐವರಿಗೆ ಕಾಂಗ್ರೆಸ್‌-ಬಿಜೆಪಿ ಗಾಳ

22 Dec 2017 9:54 AM | Politics
481 Report

ಕರ್ನಾಟಕದಲ್ಲೂ ಗುಜರಾತ್‌ ಪ್ರಯೋಗಕ್ಕೆ ಮುಂದಾಗಿರುವ ಬಿಜೆಪಿ ಸ್ವಂತ ಶಕ್ತಿ ಮೇಲೆ ಗೆಲ್ಲಬಲ್ಲ ಜೆಡಿಎಸ್‌ನ ಐವರು ಹಾಲಿ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ.

ಕೆ.ಆರ್‌.ನಗರದ ನಾರಾಯಣಗೌಡ, ಭದ್ರಾವತಿಯ ಅಪ್ಪಾಜಿಗೌಡ, ಗುಬ್ಬಿ ಶ್ರೀನಿವಾಸ್‌, ಹರಿಹರ ಶಿವಶಂಕರ್‌, ನೆಲಮಂಗಲದ ಡಾ.ಶ್ರೀನಿವಾಸಮೂರ್ತಿ ಅವರನ್ನು ಬಿಜೆಪಿಗೆ ಸೆಳೆಯಲು  ಈಗಾಗಲೇ ಬಿಜೆಪಿ ಸೇರಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಮೂಲಕ ಕಾರ್ಯಾಚರಣೆಗೆ ಇಳಿಯಲಾಗಿದೆ.ಮುಂದಿನ ಚುನಾವಣೆಯಲ್ಲಿ ಟಿಕೆಟ್‌, ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ, ಚುನಾವಣೆ ವೆಚ್ಚ ಭರಿಸುವ ಭರವಸೆಯೊಂದಿಗೆ ಬಿಜೆಪಿಗೆ ಸೆಳೆಯಲು ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಈಗಾಗಲೇ ಲಿಂಗಸಗೂರು ಮಾನಪ್ಪ ವಜ್ಜಲ್‌, ರಾಯಚೂರು ಡಾ.ಶಿವರಾಜ್‌ ಪಾಟೀಲ್‌, ಅರಸೀಕರೆಯ ಶಿವಲಿಂಗೇಗೌಡ, ಬಸವಕಲ್ಯಾಣದ ಮಲ್ಲಿಕಾರ್ಜುನ ಕೂಬಾ, ದೇವನಹಳ್ಳಿಯ ಪಿಳ್ಳಮುನಿಸ್ವಾಮಪ್ಪ ಅವರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿರುವ ಬಿಜೆಪಿ ಇದೀಗ ಇನ್ನೂ ಐವರಿಗೆ ಗಾಳ ಹಾಕಿದ್ದು ಸಂಕ್ರಾಂತಿ ನಂತರ  ಈ ಪೈಕಿ ಕೆಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿಯು ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರಲು "ಟಾರ್ಗೆಟ್‌ 150' ಕಾರ್ಯಾಚರಣೆ ಬೆನ್ನು ಬಿದ್ದಿದ್ದರೂ  ಈಗಿನ ಪರಿಸ್ಥಿತಿಯಲ್ಲಿ 80 ರಿಂದ 90 ಸ್ಥಾನ ಗಳಿಸಬಹುದಷ್ಟೇ ಎಂದು ಗುಪ್ತದಳ ಮಾಹಿತಿ ನೀಡಿದೆ. ಹೀಗಾಗಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿರುವ ಸ್ವಂತ ಶಕ್ತಿಯ ಮೇಲೆ ಗೆಲ್ಲಬಲ್ಲ ಶಾಸಕರತ್ತ ಚಿತ್ತ ಹರಿಸಿದೆ. ಕಾಂಗ್ರೆಸ್‌ನಲ್ಲಿಯೂ ಮಧುಗಿರಿಯ ಕೆ.ಎನ್‌.ರಾಜಣ್ಣ, ಬಸವನಬಾಗೇವಾಡಿಯ ಶಿವಾನಂದಪಾಟೀಲ್‌ ಸೇರಿ ಇಬ್ಬರು ಸಚಿವರ ಸಮೇತ ಐವರನ್ನು ಸೆಳೆಯಲು ಮುಂದಾಗಿದೆ ಎಂದು ಹೇಳಲಾಗಿದೆ.ಮತ್ತೂಂದೆಡೆ ಕಾಂಗ್ರೆಸ್‌ ಪಕ್ಷವು ಸಹ ಜೆಡಿಎಸ್‌ ಹಾಲಿ ಶಾಸಕರನ್ನು ಸೆಳೆಯಲು ಕಾರ್ಯಾಚರಣೆಯಲ್ಲಿ ತೊಡಗಿದ್ದು , ಸಚಿವರಾದ ಜಮೀರ್‌ ಅಹಮದ್‌, ಚೆಲುವರಾಯಸ್ವಾಮಿ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಈಗಾಗಲೇ ಬೆಳಗಾವಿಯ ಗ್ರಾಮಾಂತರ ಭಾಗದ ಪ್ರಭಾವಿ ಮುಖಂಡ ಸೀಮಂತ್‌ ಪಾಟೀಲ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ  ಯಶಸ್ವಿಯಾಗಿದ್ದು, ಹಾಲಿ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ಜೆಡಿಎಸ್‌ ಶಾಸಕರನ್ನು ಸಂಪರ್ಕಿಸಿ ಟಿಕೆಟ್‌ ಕೊಡುವ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಂದ ಆಹ್ವಾನ ಬಂದಿರುವ ಹಿನ್ನೆಲೆಯಲ್ಲಿ ಯಾವ ಪಕ್ಷಕ್ಕೆ ಹೋದರೆ ಲಾಭ ಎಂಬ ಗೊಂದಲ ಹಾಗೂ ಲೆಕ್ಕಾಚಾರದಲ್ಲಿ ಜೆಡಿಎಸ್‌ ಶಾಸಕರು ಮುಳುಗಿದ್ದಾರೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ 40 ಸ್ಥಾನ ಗಳಿಸಿತ್ತು.  ಈಗಾಗಲೇ ಏಳು ಶಾಸಕರು ಕಾಂಗ್ರೆಸ್‌ ಸೇರುವುದು ಖಚಿತವಾಗಿದೆ. ಇನ್ನೂ ಹತ್ತು ಶಾಸಕರಿಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಗಾಳ ಹಾಕಿದೆ.ಈ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರಿಗೂ ಮಾಹಿತಿ ಇದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿಯತ್ತ ಹೋಗುವ ಮನಸ್ಸು ಮಾಡಿರುವ ಶಾಸಕರನ್ನು ಕರೆದು ಮಾತನಾಡಿ ಪಕ್ಷದಲ್ಲೇ ಉಳಿಯುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್‌ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಅವಕಾಶವಿದೆ. ಒಂದೊಮ್ಮೆ ಅದು ಸಾಧ್ಯವಾಗದಿದ್ದರೂ ಜೆಡಿಎಸ್‌ ಬಿಟ್ಟು ಯಾರೂ ರಾಜ್ಯದಲ್ಲಿ ಅಧಿಕಾರ ರಚಿಸಲು ಸಾಧ್ಯವಿಲ್ಲ. ನಿಮಗೆಲ್ಲಾ ಉತ್ತಮ ಭವಿಷ್ಯವಿದೆ ಎಂದು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

Edited By

Shruthi G

Reported By

Shruthi G

Comments