ಗುಜರಾತ್ ಚುನಾವಣಾ ಫಲಿತಾಂಶ ನೋಡಿ ಸಿಎಂ ಇಲ್ಲ ಸಲ್ಲದ ಹೇಳಿಕೆ : ಈಶ್ವರಪ್ಪ

20 Dec 2017 4:21 PM | Politics
219 Report

'ಗುಜರಾತ್, ಹಿಮಾಚಲ ಪ್ರದೇಶದ ಫಲಿತಾಂಶ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲ ಸಲ್ಲದ ಹೇಳಿಕೆ ನೀಡತೊಡಗಿದ್ದಾರೆ' ಎಂದು ಈಶ್ವರಪ್ಪ ಲೇವಡಿ ಮಾಡಿದರು.

ಜಾತಿ ಹಾಗೂ ಧರ್ಮ ಒಡೆಯುವ ಪ್ರಯತ್ನವನ್ನು ಚುನಾವಣೆಯಲ್ಲಿ ನಡೆಸಲಾಗಿತ್ತು. ಆದರೆ, ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮಣ್ಣುಮುಕ್ಕಿದೆ. ಅದೇ ರೀತಿ ಕರ್ನಾಟಕದಲ್ಲೂ ಆಗುತ್ತದೆ' ಎಂದರು. 'ಧರ್ಮ ಹಾಗೂ ಜಾತಿ ಒಡೆದು ಆಳಿದರೆ ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದರೆ, ಅದರಿಂದ ಹೊರಬರಬೇಕು. ಧರ್ಮ, ಜಾತಿ ನಡುವೆ ಬೆಂಕಿ ಹಚ್ಚುವುದನ್ನು ನಿಲ್ಲಿಸಬೇಕು. ಸರ್ಕಾರದ ಸಾಧನೆ ಹಾಗೂ ಅಭಿವೃದ್ದಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು' ಎಂದು ಹೇಳಿದರು.

'ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳಬೇಕು. ಅದು ಬಿಟ್ಟು ವಿದ್ಯುನ್ಮಾನ ಮತಯಂತ್ರ ದೋಷಪೂರಿತವಾಗಿದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಸೋಲು ಒಪ್ಪಿಕೊಳ್ಳುವ ಪ್ರವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಬೇಕಿದೆ' ಎಂದು ಸಲಹೆ ನೀಡಿದರು. 'ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಇನ್ನು ಬಿಜೆಪಿ ಸ್ಪಷ್ಟ ಬಹುಮತ ಗಳಿಸುವುದು ನಿಶ್ಚಿತ. ಬಿ.ಎಸ್.ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Edited By

Hema Latha

Reported By

Madhu shree

Comments