ಗುಜರಾತ್‌ ಫ‌ಲಿತಾಂಶದ ನಂತರ ಜೆಡಿಎಸ್ ಗೆ ಎದುರಾಗಿದೆ ದೊಡ್ಡ ಸವಾಲು ?

19 Dec 2017 10:20 AM | Politics
307 Report

ಗುಜರಾತ್‌ನಲ್ಲಿ ಶಕ್ತಿಯುತ ಪ್ರಾದೇಶಿಕ ಪಕ್ಷ ಇರಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆಯೇ ಸೆಣಸಾಟವಿತ್ತು. ಆದರೆ, ಕರ್ನಾಟಕದಲ್ಲಿ ಹಾಗಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ನೀಡುವ ಸಾಮರ್ಥ್ಯ ನಮಗಿದೆ ಎಂಬ ಸಮರ್ಥನೆಯೊಂದಿಗೆ ಮುನ್ನಡೆಯಬೇಕಾದ ಸ್ಥಿತಿ ಜೆಡಿಎಸ್‌ನದ್ದಾಗಿದೆ.

ಈಗಾಗಲೇ ಪ್ರಾರಂಭಿಸಿರುವ ಸಮುದಾಯವಾರು ಸಮಾವೇಶ ಮುಂದುವರಿಸಿ ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಎನಿಸಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಮತಬ್ಯಾಂಕ್‌ಗೆ ಲಗ್ಗೆ ಹಾಕುವುದು. ಜತೆಗೆ ಜನತಾಪರಿವಾರದ ಹಳೇ ನಾಯಕರನ್ನು ಒಟ್ಟುಗೂಡಿಸುವುದು. ಇದಕ್ಕಾಗಿ ಎಂ.ಸಿ.ನಾಣಯ್ಯ, ಬಸವರಾಜ ಹೊರಟ್ಟಿ, ಪಿ.ಜಿ.ಆರ್‌ ಸಿಂಧ್ಯಾ, ವೈ.ಎಸ್‌.ವಿ.ದತ್ತ ಅವರ ತಂಡ ರಚಿಸಲು ತೀರ್ಮಾನಿಸಲಾಗಿದೆ. ಜೆಡಿಎಸ್‌ ಎಂದರೆ ಅಪ್ಪ-ಮಕ್ಕಳ‌ ಪಕ್ಷ ಎಂಬ ಹಣೆಪಟ್ಟಿ ತೆಗೆದುಹಾಕುವ ಪ್ರಯತ್ನವೂ ಇದರ ಹಿಂದಿದೆ.

ಜತೆಗೆ ಬಿಎಸ್‌ಪಿ, ಜೆಡಿಯು ಶರದ್‌ ಯಾದವ್‌ಬಣ, ರೈತ, ದಲಿತ, ಕಾರ್ಮಿಕ, ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿ ಕೊಂಡು ಕೆಲವು ಕಡೆ ಸೀಟು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ಲೆಕ್ಕಾಚಾರ ಸಹ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ತಮ್ಮ ಮತಬ್ಯಾಂಕ್‌ ಗಟ್ಟಿಗೊಳಿಸುವ ಜತೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮತಬ್ಯಾಂಕ್‌ಗೆ ಲಗ್ಗೆ ಇಡಲು ಕಾರ್ಯತಂತ್ರ ರೂಪಿಸಲು ಸದ್ಯದಲ್ಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚರ್ಚಿಸಲಿದ್ದು ನಂತರ ಪಕ್ಷದ ಕೋರ್‌ ಕಮಿಟಿ ಸಭೆ ಕರೆದು ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡಲಿದೆ ಎನ್ನಲಾಗಿದೆ. ಒಟ್ಟಾರೆ, ಹಳೇ ಮೈಸೂರು ಭಾಗದ ಜತೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಹೆಚ್ಚು ಸೀಟು ಪಡೆಯುವ ಗುರಿ ಇಟ್ಟುಕೊಂಡಿರುವ ಜೆಡಿಎಸ್‌, ಈ ಹಂತದವರೆಗಿನ ಪಕ್ಷದ "ವೃದ್ಧಿ' ಕಾಯ್ದಿಟ್ಟು ಕೊಂಡು ಮತ್ತಷ್ಟು ಬಲ ತುಂಬಿಸಿಕೊಳ್ಳಬೇಕಿದೆ.

Edited By

Hema Latha

Reported By

Madhu shree

Comments