ದೇಶಾದ್ಯಂತ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆ ಚುನಾವಣೆ

09 Dec 2017 1:09 PM | Politics
271 Report

ವ್ಯಾಪಕ ಬಿಗಿ ಬಂದೋಬಸ್ತ್ ನಡುವೆ ಇಂದು ಬೆಳಗ್ಗೆ 8 ಗಂಟೆಯಿಂದ 24,689 ಮತ ಕೇಂದ್ರಗಳಲ್ಲಿ ಮತದಾನ ನಡೆದಿದ್ದು, 27,158 ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಬಳಸಲಾಗಿದೆ. ಪ್ರಥಮ ಹಂತದ ಚುನಾವಣೆಯಲ್ಲಿ 2,12,31,652 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ. ಇವರಲ್ಲಿ 1,11,05,033 ಪುರುಷರು ಮತ್ತು 1,01,25,472 ಮಂದಿ ಮಹಿಳಾ ಮತದಾರರಿದ್ದಾರೆ.

ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಮುಖ್ಯಮಂತ್ರಿ ವಿಜಯ್‍ಭಾಯ್ ರೂಪಾನಿ ಸೇರಿದಂತೆ 977 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಲಿರುವ ರಾಹುಲ್‍ಗಾಂಧಿ ಅವರಿಗೆ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯನ್ನು ರಾಜಕೀಯ ಕುರುಕ್ಷೇತ್ರವೆಂದೇ ಬಣ್ಣಿಸಲಾಗಿದೆ. ಒಟ್ಟು 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಸುಗಮ ಮತ್ತು ಶಾಂತಿಯುತ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

ಬಿಜೆಪಿ ಎಲ್ಲ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 87 ಸ್ಥಾನಗಳಲ್ಲಿ ಕಣಕ್ಕಿಳಿದಿದೆ. ಬಹುಜನ ಸಮಾಜ ಪಕ್ಷ 64 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜ್‍ಕೋಟ್(ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇವರಿಗೆ ಕಾಂಗ್ರೆಸ್‍ನ ಇಂದ್ರನಿಲ್ ರಾಜ್ಯಗುರು ಪ್ರತಿಸ್ಪರ್ಧಿಯಾಗಿದ್ದಾರೆ. ರಾಜಪೂತ್ ಪ್ರಭಾವಿ ನಾಯಕ ಶಕ್ತಿಸಿಂಗ್ ಗೋಹಿಲ್(ಮಾಂಡ್ವಿ), ಕಾಂಗ್ರೆಸ್ ಮುಖಂಡ ಪರೇಶ್ ಧನಾವಿ(ಅಮೇಲ್ರಿ) ಮೊದಲಾದ ಪ್ರಮುಖರ ಹಣೆಬರಹ ನಾಳೆ ನಿರ್ಧಾರವಾಗಲಿದೆ.

Edited By

Shruthi G

Reported By

Madhu shree

Comments