ಡಬಲ್‌ಗೇಮ್ ರಾಜಕಾರಣ ಮಾಡುವುದನ್ನು ನಾನು ಸಹಿಸುವುದಿಲ್ಲ : ಎಚ್ ಡಿಕೆ ಗುಡುಗು

07 Dec 2017 5:50 PM | Politics
387 Report

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಯವರು, ಜೆಡಿಎಸ್ ಪಕ್ಷ ಬಿಟ್ಟು ಹೋಗುವವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಹೋಗುವವರ ಬಗ್ಗೆ ಏನೂ ಮಾತನಾಡುವುದಿಲ್ಲ. ಪಕ್ಷದಿಂದ ಅಲ್ಪಸ್ವಲ್ಪ ಅನುಕೂಲ ಪಡೆದವರು ಪಕ್ಷಕ್ಕೆ ನಿಯತ್ತಾಗಿರಬೇಕು. ಪಕ್ಷಕ್ಕೆ ಡ್ಯಾಮೇಜ್ ಮಾಡಿ ಹೋಗುವುದು ಬೇಕಿಲ್ಲ. ಡಬಲ್‌ಗೇಮ್ ರಾಜಕಾರಣ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಕಟುವಾಗಿ ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್‌‌ನಿಂದ ಯಾರಿಗೂ ತಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟಿಲ್ಲ. ಆದರೆ, ನಾಡಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಯಾರಾದರೂ ಕೈಜೋಡಿಸುತ್ತೇನೆ ಎಂದರೆ ನಾನು ಒಪ್ಪುತ್ತೇನೆ. ನಾನು ಯಾರನ್ನೂ ಹುಡುಕಿಕೊಂಡು ಹೋಗಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಹತ್ತಿರ ಬಂದಾಗ ಅಭಿವೃದ್ದಿ ಕಾರ್ಯಕ್ರಮಗಳನ್ನು ಶುರುಮಾಡುತ್ತಿದ್ದಾರೆ,ಜನರ ತೆರಿಗೆ ಹಣದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.4.5ವರ್ಷದ ಬಳಿಕ ಸಿಎಂ ಉತ್ತರ ಕರ್ನಾಟಕ ಪ್ರವಾಸ ಪ್ರಾರಂಭಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅವರಿಗೆ ಉತ್ತರ ಕರ್ನಾಟಕ ನೆನಪಾಗಿದೆ. ಭಟ್ಕಳದಲ್ಲಿ 1,500 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ರೀತಿ ಚುನಾವಣಾ ಪ್ರಚಾರಕ್ಕೆ ಜಿಲ್ಲಾಡಳಿತದಿಂದಲೇ ಕಾರ್ಯಕ್ರಮ ಆಯೋಜನೆಗೆ ನೂರಾರು ಕೋಟಿ ರೂ. ಟೆಂಡರ್ ಕರೆದಿದ್ದಾರೆ. ದೇಶದಲ್ಲೇ ಇಂಥ ಘಟನೆ ನಡೆದಿಲ್ಲ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದು ಪಿಕ್ ಪಾಕೇಟ್ ಸರ್ಕಾರ. 10 ರೂ. ಮದ್ಯದ ಮೇಲೆ ಮನ ಬಂದಂತೆ ತೆರಿಗೆ ಹಾಕಿ 70 ರೂ.ಗೆ ಮಾರಾಟ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇದು. ಈ ಹಣದಲ್ಲಿ ಹಾಲು, ಅನ್ನ ಯೋಜನೆ ಜಾರಿಗೆ ತಂದಿದ್ದು, ಕುಡುಕರ ಜೇಬಿನಿಂದ ಪಿಕ್ ಪಾಕೇಟ್ ಮಾಡುತ್ತಿರುವ ಸರ್ಕಾರ ಇದು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಒಂದು ಲಕ್ಷದ ಇಪ್ಪತ್ತೆಂಟು ಸಾವಿರ ಕೋಟಿ ರೂ. ಸಾಲ ಮಾಡಿದೆ ಎಂದು ದೂರಿದರು.ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸಕ್ಕೆ ಹೊರಟ್ಟಿದ್ದರೆ, ಕಾಂಗ್ರೆಸ್ ಶಾಸಕರು ಇರದಿರುವ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪ್ರವಾಸ ಮಾಡುತ್ತಿದ್ದಾರೆ. ಬಂಡಾಯದ ಬಿಸಿ ಇರುವ ಕ್ಷೇತ್ರಗಳಲ್ಲಿ ಪಾಪ ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೀರೆ ಮತ್ತು ಸೈಕಲ್ ಕೊಟ್ಟಿದ್ದನ್ನೇ ‘ಸೀರೆ- ಸೈಕಲ್, ಸೀರೆ- ಸೈಕಲ್’ ಎಂದು ಹೇಳಿಕೊಂಡು ಓಡಾಡುತ್ತಿರುವುದನ್ನು ಸಿಎಂ ಡ್ಯಾನ್ಸ್ ಮಾಡಿ ತಮಾಷೆಯಾಗಿ ತೋರಿಸುತ್ತಾರೆ. ಆದರೆ, ಸಿದ್ದರಾಮಯ್ಯ ಮಾಡುತ್ತಿರುವುದು ಇದನ್ನೇ. ಸಿದ್ದರಾಮಯ್ಯ ಅನ್ನ-ಹಾಲು, ಅನ್ನ-ಹಾಲು, ಅಂತ ಹೇಳಿಕೊಂಡು ಕುಣಿದಾಡ್ತಾ ಇಲ್ವಾ? ಎಂದು ಲೇವಡಿ ಮಾಡಿದರು.

Edited By

Shruthi G

Reported By

Shruthi G

Comments