ಪ್ರಜಾಪ್ರಭುತ್ವವಾದಿ ಪಕ್ಷಗಳ ಬಗ್ಗೆ ಭವಿಷ್ಯ ನುಡಿದ ದೇವೇಗೌಡರು

05 Dec 2017 3:20 PM | Politics
434 Report

ಗುಜರಾತ್‍ನಲ್ಲಿ 22 ವರ್ಷ ರಾಜ್ಯಭಾರ ಮಾಡಿ ಅಭಿವೃದ್ಧಿ, ಅಭಿವೃದ್ಧಿ ಎಂದು ಈಗ ಅದನ್ನು ಮಾತನಾಡದೆ ನಾನು ಗುಜರಾತಿಗ, ನನ್ನನ್ನು ಉಳಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ ಎಂದು ಮೋದಿಯವರನ್ನು ಟೀಕಿಸಿದರು. ಗುಜರಾತ್ ಮತ್ತು ಹಿಮಾಚಲ ಚುನಾವಣಾ ಫಲಿತಾಂಶದ ನಂತರ ದೇಶದಲ್ಲಿ ಮತ್ತೆ ಪ್ರಜಾಪ್ರಭುತ್ವವಾದಿ ಪಕ್ಷಗಳೆಲ್ಲ ಒಗ್ಗೂಡುವ ಸಾಧ್ಯತೆ ಇದೆ ಎಂದು ದೇವೇಗೌಡರು ಭವಿಷ್ಯ ನುಡಿದರು.

ಮೊದಲ ಬಾರಿಗೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದು ನಾನು. ಆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾಂಗ್ರೆಸ್‌‌ ಸರ್ಕಾರದ ಬಗ್ಗೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಬಳ್ಳಾರಿಯಿಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಸಿದ್ದರಾಮಯ್ಯ ಇಲ್ಲಿವರೆಗೆ ಭಷ್ಟಾಚಾರ ರಹಿತವಾದ ಆಡಳಿತ ನೀಡಿದ್ದಾರೆ. ಸಚಿವವರೂ ಸಹ ಕ್ಲೀನ್‌ ಹ್ಯಾಂಡ್‌ ಆಗಿದ್ದಾರೆ. ಯಾಕೆಂದರೆ ಅವರಿಗೆ ಭ್ರಷ್ಟಾಚಾರ ನಿಗ್ರಹದಳ ಇದೆ ಎಂದು ದೇವೇಗೌಡರು ಹೇಳಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರೂ ಭ್ರಷ್ಟಾಚಾರ ರಹಿತ ಸರ್ಕಾರ ನಡೆಸಿದ್ದರು. ಆದರೆ ಅವರ ಮೇಲೆ ಪ್ರಕರಣವೊಂದರ ವಿಚಾರಣೆ ಬಾಕಿ ಇರುವುದರಿಂದ ಹಾಗೆ ಹೇಳಲು ಬರುವುದಿಲ್ಲವೆಂದು ತಮ್ಮ ಮಗನನ್ನೇ ಪರೋಕ್ಷವಾಗಿ ಜರಿದರು.

ಬಿಜೆಪಿಯವರು ಈ ಮೊದಲು ಮಂಗಳೂರು, ಈಗ ಬಾಬಾ ಬುಡನ್ ಗಿರಿ, ಹುಣಸೂರು ಹೀಗೆ ಕೋಮಗಲಭೆ ಎಬ್ಬಿಸಲು ಮುಂದಾಗಿದ್ದಾರೆ ಎಂದು ದೂರಿದರು. ಇದೆಲ್ಲ ಚುನಾವಣೆ ಹತ್ತಿರ ಇರುವುದರಿಂದ, ಅವರಿಗೆ ರಾಮನ ದೇವಸ್ಥಾನ ಕಟ್ಟಲು ತೀವ್ರತೆ ಇದೆ, ಅದಕ್ಕೆ ನಾನು ವಿರೋಧ ಮಾಡಲ್ಲ. ಆದರೆ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ ಎಂದು ದೇವೇಗೌಡರು ಹೇಳಿದರು.ಉಡುಪಿ ಪೇಜಾವರ ಶ್ರೀಗಳು ಧರ್ಮ ಸಂಸದ್‌ನಲ್ಲಿ ಎಲ್ಲ ಹಿಂದು ಧರ್ಮಿಯರು ಜಾತಿಗಳ ಭೇದ ಭಿನ್ನತೆ ಇಲ್ಲದೆ ಶವ ಸಂಸ್ಕಾರ ಒಂದೇ ಸ್ಥಳದಲ್ಲಿ ನಡೆಯಲಿ ಎಂದು ಹೇಳಿದ್ದಾರೆ. ಇದು ಸಾಧ್ಯಾನಾ. ಮಾತಿಗೆ ಗೌರವ ಇರಬೇಕು. ಇನ್ನು ಮುಸ್ಲಿಂ ಮತ್ತು ಕ್ರೈಸ್ತರು ಏನು ಮಾಡಬೇಕು ಎಂದು ದೇವೇಗೌಡರು ಪ್ರಶ್ನಿಸಿದರು.


Edited By

Shruthi G

Reported By

Shruthi G

Comments