ಮನೆ ಮನೆಗೆ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಎಚ್.ಡಿ.ರೇವಣ್ಣ

02 Dec 2017 10:54 AM | Politics
326 Report

ಕಾಂಗ್ರೆಸ್‍ನ ನಾಯಕರು ಬಂದರೆ ಹಳ್ಳಿಯ ಹೆಂಗಸರು ಈಗ ಬಂದಿದ್ದೀರಾ ಎಂದು ಎಲೆ ಅಡಿಕೆ ಹಾಕೊಂಡು ಮುಖಕ್ಕೆ ಉಗೀತಾರೆ. ಆದ್ದರಿಂದ ಮನೆ ಮನೆಗೆ ಸ್ಥಳೀಯ ಯುವಕರನ್ನು ಕಳುಹಿಸುತ್ತಿದ್ದಾರೆ ಎಂದು ಮನೆ ಮನೆ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಯುವಕರಿಗೆ ಸ್ವಲ್ಪ ಮೇವು ಹಾಕಿ ಕಳಿಸುತ್ತಿದ್ದಾರೆ ಎಂದು ಟೀಕಿಸಿದರು. ಹಾಸನ ಕಾಂಗ್ರೆಸ್‌ನಲ್ಲಿ ಟೈರ್ ಕದ್ದ ಕಳ್ಳರು, ಬ್ಯಾಟರಿ ಕಳ್ಳರಿದ್ದಾರೆ, ಇಲ್ಲಿ ವಾಹನ ನಿಲ್ಲಿಸೋದಕ್ಕೆ ಭಯ ಆಗುತ್ತದೆ ಎಂದು ವ್ಯಂಗ್ಯ ಮಾಡಿದರು. ಕಳ್ಳರಿಗೆ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆ ನೀಡಿದ್ದಾರೆ, ಜಿಲ್ಲಾಪಂಚಾಯ್ತಿಯಲ್ಲಿ ಸಿಇಓ ರಬ್ಬರ್ ಸ್ಟ್ಯಾಂಪ್‌ನಂತೆ ಕೆಲಸ ಮಾಡುತ್ತಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನು ಗೊಂಬೆ ಎಂದ ಅವರು ಈ ಗೊಂಬೆಗೆ ನಾವೇ ಆಕ್ಸಿಜನ್ ಕೊಡಬೇಕು ಎಂದು ಲೇವಡಿ ಮಾಡಿದರು.

ಹಾಸನದಲ್ಲೇ ಕಡಿಮೆ ಹಣಕ್ಕೆ ಮೆಕ್ಕೆಜೋಳ ಖರೀದಿಸಿದ್ದಾರೆ. ಹೊರರಾಜ್ಯದಿಂದ ಮೆಕ್ಕೆಜೋಳ ಖರೀದಿಸಿರುವುದಾಗಿ ಬಿಲ್ ಪಾವತಿಸಿದ್ದಾರೆ ಎಂದು ದೂರಿದರು. ಹಾಸನದ ಡೈರಿಯಲ್ಲಿ ಮೆಕ್ಕೆಜೋಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ, ರಾಜ್ಯ ಸರ್ಕಾರ ಈ ಬಗ್ಗೆ ಮೃದು ಧೋರಣೆ ತಾಳಿದೆ ಎಂದು ಆರೋಪಿಸಿದರು. ಈ ಬಗ್ಗೆ ಕೆಎಂಎಫ್ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು ರೈತರಿಂದ ಮೆಕ್ಕೆಜೋಳ ನೇರವಾಗಿ ಖರೀದಿಸುವಂತೆ ಸರ್ಕಾರವನ್ನು ಎಚ್.ಡಿ. ರೇವಣ್ಣ
ಒತ್ತಾಯಿಸಿದರು.

Edited By

Shruthi G

Reported By

Shruthi G

Comments