ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ದೇವೇಗೌಡರ ಮಾಸ್ಟರ್ ಪ್ಲಾನ್

28 Nov 2017 10:35 AM | Politics
292 Report

ಕ್ಷೇತ್ರದಲ್ಲಿ ನಡೆಯುವ ಮುಂದಿನ ಚುನಾವಣೆ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ಸವಾಲಿನ ಚುನಾವಣೆಯೇ ಹೊರತು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವಿನ ಚುನಾವಣೆಯಲ್ಲ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಲುವಾಗಿ ನಾಲ್ಕುಬಾರಿ ತಾಲೂಕಿಗೆ ಬಂದು ಪ್ರಚಾರ ಮಾಡುತ್ತೇನೆ. ವ್ಯತ್ಯಾಸವಿರುವ ಭಾಗಗಳಿಗೆ ನಾನೇ ಖುದ್ದು ಭೇಟಿ ಕೊಟ್ಟು ಎಲ್ಲವನ್ನೂ ಸರಿಪಡಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಹೋಗುತ್ತೇನೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ತಾಲೂಕಿನ ಬೆಳ್ಳೂರಿನಲ್ಲಿ ಜೆಡಿಎಸ್ ಪಕ್ಷದ ಹೋಬಳಿ ಘಟಕದ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು,ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ವಿಧಾನಸಭಾ ಚುನಾವಣೆಗೆ 120 ದಿನ ಇರುವಾಗ ನೂರಾರು ಕೋಟಿ ಕಾಮಗಾರಿಗೆ ಅಡಿಗಲ್ಲು ಹಾಕಿಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ಕೆಲಸವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಮಾಡಿಹೋಗಿದ್ದರೆ ಅವರನ್ನು ಮೆಚ್ಚಿಕೊಳ್ಳುತ್ತಿದ್ದೆ ಎಂದರು.ಜೆಡಿಎಸ್ ಪಕ್ಷ ಕೇವಲ ದೇವೇಗೌಡ ಅಥವಾ ಕುಮಾರಸ್ವಾಮಿಯದಲ್ಲ, ಎಲ್ಲ ಜಾತಿ ವರ್ಗಗಳ ರೈತರು ಕಟ್ಟಿ ಬೆಳೆಸಿದ ಜೆಡಿಎಸ್ ಪಕ್ಷದಲ್ಲಿ ನಾನೂ ಸೇರಿದಂತೆ ಕುಮಾರಸ್ವಾಮಿ, ಸಿದ್ದರಾಮಯ್ಯ ರಾಜಕೀಯವಾಗಿ ಬೆಳೆದಿದ್ದರೆ ಅದು ನಿಮ್ಮಿಂದ ಮಾತ್ರ. ಒಬ್ಬ ಜನ ನಾಯಕನಾದವನಿಗೆ ತನ್ನನ್ನು ರಾಜಕೀಯವಾಗಿ ಮೇಲೆತ್ತಿದ್ದ ಜನರಿಗೆ ಎಂದೂ ದ್ರೋಹ ಬಗೆಯಬಾರದೆಂಬ ಮನೋಭಾವವಿರಬೇಕು. ಆಗ ಮಾತ್ರ ಜನರ ಪ್ರೀತಿ ವಿಶ್ವಾಸವನ್ನು ಸದಾ ಉಳಿಸಿಕೊಳ್ಳಬಹುದು ಎಂದು ಪರೋಕ್ಷವಾಗಿ ಶಾಸಕ ಚಲುವರಾಯಸ್ವಾಮಿಯನ್ನು ಕುಟುಕಿದರು.

ಕಳೆದ 55 ವರ್ಷದ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಸಹ ರೈತರಿಗೆ ವಂಚನೆ ಮಾಡಿಲ್ಲ. ನನಗೆ 75 ವರ್ಷ ವಯಸ್ಸಾಗಿದ್ದರೂ ರೈತರ ಪರ ಹೋರಾಟಕ್ಕೆ ಧುಮುಕಿದರೆ ದೇವೇಗೌಡರ ವಯಸ್ಸು 25ರ ಪ್ರಾಯದಂತಿರುತ್ತದೆ. ಆದ್ದರಿಂದ ಕಾವೇರಿ ನೀರಿನ ವಿಚಾರದಲ್ಲಿ ಬೆಂಗಳೂರಿನ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆ ಮುಂದೆ ಉಪವಾಸ ಸತ್ಯಾಗ್ರಹ ಮಾಡುವ ಪರಿಸ್ಥಿತಿ ಎದುರಾಯಿತು. ದೇವೇಗೌಡರ ಘಟ ಬಿದ್ದುಹೋಗುವವರೆಗೂ ರೈತರ ಪರವಾದ ಹೋರಾಟ ನಿಲ್ಲದು ಎಂದು ಗುಡುಗಿದರು. ಘಜ್ನಿ ಮತ್ತು ಘೋರಿ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದಂತೆ ಈಗಿನ ಎಲ್ಲ ರಾಜಕಾರಣಿಗಳು ಲೂಟಿ ಮಾಡುವ ಉದ್ದೇಶದಿಂದಲೇ ಹೊರಟಿದ್ದಾರೆಯೇ ಹೊರತು, ಜನಪರ ಕಾಳಜಿ ಯಾರೊಬ್ಬರಿಗೂ ಇಲ್ಲ. ಆದರೆ ದೇವೇಗೌಡ ಯಾರಿಗಾದರೂ ಮೋಸ ಮಾಡಿದ್ದಾರೆ ಅಥವಾ ಯಾವುದೋ ಆಸ್ತಿ ಹೊಡೆದಿದ್ದಾರೆಂದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಹೊಂದಿ ಮನೆಯಲ್ಲಿ ಕೂರುತ್ತೇನೆ ಎಂದರು.


 

Edited By

Shruthi G

Reported By

Shruthi G

Comments