ಡಿಕೆಶಿ ಜೊತೆ ಮಾತುಕತೆಯ ಬಗ್ಗೆ ಸ್ಪಷ್ಟಣೆ ನೀಡಿ ತೆರೆ ಎಳೆದ ಅನಿತಾ ಕುಮಾರಸ್ವಾಮಿ

27 Nov 2017 6:25 PM | Politics
2913 Report

ಎರಡು ದಿನದಿಂದ ರಾಜಕೀಯ ರಂಗದಲ್ಲಿ ಹಲವಾರು ಊಹಾಪೋಹಗಳಿಗೆ, ಗುಣಾಕಾರ, ಭಾಗಾಕಾರಕ್ಕೆ ಕಾರಣವಾಗುತ್ತಿರುವ ಡಿಕೆಶಿ, ಅನಿತಾ ಕುಮಾರಸ್ವಾಮಿ ಮಾತುಕತೆ ಗದ್ದಲಕ್ಕೆ ಸ್ವತಃ ಅನಿತಾ ಕುಮಾರಸ್ವಾಮಿ ಅವರೇ ಸ್ಪಷ್ಟಣೆ ನೀಡಿ ತೆರೆ ಎಳೆಯಲು ಪ್ರಯತ್ನಪಟ್ಟಿದ್ದಾರೆ.

ತಾಲ್ಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ ಸೋಮವಾರ (ನವೆಂಬರ್ 27) ದೇವಸ್ಥಾನದ ಉದ್ಘಾಟನೆ ಸಂದರ್ಭ ಪತ್ರಕರ್ತರೊಡನೆ ಈವಿಷಯ ಮಾತನಾಡಿದ ಅವರು 'ನನ್ನ ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಡುವಿನ ಮಾತುಕತೆ ಕೇವಲ ಔಪಚಾರಿಕವಾಗಿದ್ದು, ಮಾಧ್ಯಮಗಳು ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು' ಎಂದು ಮನವಿ ಮಾಡಿದರು.ಚೆನ್ನಪಟ್ಟಣದಲ್ಲಿ ಮೊನ್ನೆ ನಡೆದ 'ಕನಕನ ಹಬ್ಬ' ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಅನಿತಾ ಕುಮಾರಸ್ವಾಮಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಅಕ್ಕ ಪಕ್ಕ ಕೂತಿದ್ದ ಇಬ್ಬರೂ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಆ ನಂತರ ಭಾಷಣ ಮಾಡುವಾಗಲೂ ಕೂಡ ಡಿ.ಕೆ.ಶಿ ಅವರು ಅನಿತಾ ಅವರನ್ನು ಹೊಗಳಿ ಮಾತನಾಡಿದ್ದರು. ಇದು ರಾಜ್ಯ ರಾಜಕೀಯ ರಂಗದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿತ್ತು.

ಕಾಂಗ್ರೆಸ್ ಬಿಟ್ಟು ಬಿ.ಜೆ.ಪಿ ಸೇರಿರುವ ಸಿ.ಪಿ.ಯೋಗೀಶ್ವರ್ ಅವರನ್ನು ಹಣಿಯಲು ಡಿ.ಕೆ.ಶಿವಕುಮಾರ್ ಅವರ ಹೊಸ ನಡೆ ಇದು ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಚೆನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಮೂಲಕ ಅನಿತಾ ಕುಮಾರಸ್ವಾಮಿ ಕೂಡ ಚುನಾವಣೆಗೆ ನಿಲ್ಲುವ ಸಾದ್ಯತೆ ಇದೆ ಹಾಗಾಗಿ ಇವರಿಬ್ಬರ ಮಾತುಕತೆ ಬಹಳ ಮುಖ್ಯ ಎನಿಸಿಕೊಳ್ಳುತ್ತಿದೆ. ಆದರೆ ಅನಿತಾ ಕುಮಾರಸ್ವಾಮಿ ಇದನ್ನೆಲ್ಲಾ ಅಲ್ಲಗೆಳೆದಿದ್ದಾರೆ.ಚನ್ನಪಟ್ಟಣದಲ್ಲಿ ಶನಿವಾರ ನಡೆದ ಕನಕ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ನಾನು ಹಾಗೂ ಶಿವಕುಮಾರ್ ಅಕ್ಕಪಕ್ಕ ಕುಳಿತಿದ್ದರಿಂದ ಸಹಜವಾಗಿ ಯೋಗಕ್ಷೇಮ ವಿಚಾರಿಸಿಕೊಂಡೆವು. ಆದರೆ ಅಲ್ಲಿ ಯಾವುದೇ ರಾಜಕೀಯದ ಮಾತುಕತೆ ಆಗಿಲ್ಲ. ಮಾಧ್ಯಮಗಳು ಇದನ್ನೇ ಬಳಸಿಕೊಂಡು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಎಂದೆಲ್ಲ ಸುದ್ದಿ ಹಬ್ಬಿಸುವುದು ಬೇಡ. ಸದ್ಯ ಅಂತಹ ಯಾವುದೇ ಪ್ರಸ್ತಾವ ಇಲ್ಲ ಎಂದು ಅವರು ಹೇಳಿದ್ದಾರೆ.ಈ ಹಿಂದೆ ನಾನು ಶಾಸಕಿಯಾಗಿದ್ದಾಗ ವಿಧಾನಸೌಧದಲ್ಲಿ ಮುಖಾಮುಖಿ ಆದ ಸಂದರ್ಭಗಳಲ್ಲಿ ಇಬ್ಬರು ಪರಸ್ಪರ ಮಾತನಾಡಿದ್ದೇವೆ. ಅದರಲ್ಲಿ ಯಾವ ವಿಶೇಷವೂ ಇಲ್ಲ ಎಂದರು.ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ ಅವರು 'ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ. ಅದಕ್ಕಿನ್ನು ಕಾಲಾವಕಾಶ ಇದೆ' ಎಂದು ಅವರು ಪ್ರತಿಕ್ರಿಯಿಸಿದರು.

 

Edited By

Shruthi G

Reported By

Shruthi G

Comments