ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಬೇಕು : ಎಚ್ ಡಿಕೆ ಒತ್ತಾಯ

13 Nov 2017 4:02 PM | Politics
370 Report

ಕೃಷ್ಣ ನದಿ ನೀರಿನ ಪಾಲನ್ನು ಎಷ್ಟು ಸದ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಎಷ್ಟು ಗುರಿ ತಲುಪಲಾಗಿದೆ, ಬಿ ಸ್ಕೀಮ್ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೈಗೊಂಡ ಕಾರ್ಯಕ್ರಮಗಳ ವೇಗ ಮೊದಲಾದವುಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನ ರಾಜ್ಯ ಸರ್ಕಾರದ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಕೊನೆಯ ಅಧಿವೇಶನವಾಗಿದ್ದು, ಅರ್ಥಪೂರ್ಣವಾಗಿ ನಡೆಯಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಹತ್ತರ ಚರ್ಚೆ ನಡೆದು ಪರಿಹಾರ ದೊರೆಯಬೇಕು ಎಂದು ಹೇಳಿದರು.  ನಿರೀಕ್ಷೆ ಮತ್ತು ಭಾವನೆಗಳಿಗೆ ತಕ್ಕಂತೆ ಅಧಿವೇಶನ ನಡೆಯಬೇಕು. ಕಾಟಾಚಾರಕ್ಕೆ ಅಧಿವೇಶನ ನಡೆಯುತ್ತದೆ ಎಂಬ ಭಾವನೆ ಹೋಗಲಾಡಿಸಬೇಕು. ಕಳೆದ ಮೂರೂವರೆ ವರ್ಷಗಳಿಂದ ನಾಡಿನ ರೈತರು ಸಂಕಷ್ಟದಲ್ಲಿದ್ದು, ಅತಿವೃಷ್ಟಿ, ಅನಾವೃಷ್ಟಿ ಎರಡರಿಂದಲೂ ಬೆಳೆ ಹಾನಿ ಸಂಭವಿಸಿದೆ. ಬೆಳೆದ ಬೆಳೆಗೆ ಬೆಲೆಯಿಲ್ಲದ ಪರಿಸ್ಥಿತಿ ಇದೆ ಎಂದರು.

ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಮಾಡಿಲ್ಲ. ಮೆಕ್ಕೆಜೋಳ, ಶೇಂಗಾ ಮುಂತಾದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರೊಂದಿಗೆ ಚೌಕಾಸಿ ಮಾಡುತ್ತಿದ್ದಾರೆ. ಸಕ್ಕರೆ ಬೆಲೆ ಹೆಚ್ಚಿದ್ದರೂ ಯೋಗ್ಯ ಬೆಲೆ ನೀಡುತ್ತಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವ ವಾತಾವರಣ ನಿರ್ಮಿಸಿ ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರು ಹಿಡಿತ ಸಾಧಿಸಲು ಹೊರಟಿದ್ದಾರೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು ಎಂದರು. ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇವರು ಯಾವಾಗ ನಿಯೋಗ ಕೊಂಡೊಯ್ಯುತ್ತಾರೆ, ಯಾವಾಗ ಬೆಂಬಲ ಬೆಲೆ ನಿಗದಿಪಡಿಸುತ್ತಾರೆ ಎಂದು  ಜೆಡಿಎಸ್ ರಾಜಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

Edited By

Hema Latha

Reported By

Madhu shree

Comments