ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಚ್.ಡಿ.ದೇವೇಗೌಡರ ತೀವ್ರ ವಾಗ್ದಾಳಿ

13 Nov 2017 9:44 AM | Politics
359 Report

ಅಧಿಕಾರ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಪ್ರಧಾನಿ ನರೇಂದ್ರ ಮೋದಿ ಭಸ್ಮಾಸುರನ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತೀವ್ರ ವಾಗ್ದಾಳಿ ನಡೆಸಿದರು.

ಯಲಹಂಕದಲ್ಲಿ ಜೆಡಿಎಸ್‍ನ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಕಾಲಿಟ್ಟ ಕಡೆಯೆಲ್ಲ ಅಧಿಕಾರ ಪಡೆಯಲು ಹವಣಿಸುತ್ತಾರೆ. ಕೇಂದ್ರ ಸರ್ಕಾರದ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ಅಧಿಕಾರಶಾಹಿಯಾಗಿ ಮೆರೆಯಲು ಹೊರಟಿದ್ದಾರೆ. ಈ ಮೂಲಕ ವಿವಿಧ ಪಕ್ಷಗಳ ಪ್ರಭಾವಿ ಮುಖಂಡರನ್ನು ಬೆದರಿಸಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ಜಯಲಲಿತಾ ಮೃತಪಟ್ಟ ನಂತರ ತಮಿಳುನಾಡಿನಲ್ಲಿ ಕಮಲ ಅರಳಿಸಬೇಕು ಎಂದುಕೊಂಡು ನರೇಂದ್ರ ಮೋದಿ ಕರುಣಾನಿಧಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಅಲ್ಲಿ ಜಯಲಲಿತಾ ಅಸ್ತಿತ್ವವನ್ನೇ ನಿರ್ನಾಮ ಮಾಡಲು ಐಟಿ ರೈಡ್ ಸೇರಿದಂತೆ ಏನೆಲ್ಲಾ ಮಾಡಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ನನ್ನ ಮಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಬೇಕೆಂಬ ಆಸೆಯಿಂದ ಹೋರಾಟಕ್ಕಿಳಿದಿಲ್ಲ. ರಾಜ್ಯವನ್ನು ಉಳಿಸಿಕೊಳ್ಳಬೇಕೆಂಬ ಗುರಿಯಿಂದ ನಾನು ಹೋರಾಟ ಮಾಡುತ್ತೇನೆ. ಇದೇ ನನ್ನ ಗುರಿ ಎಂದು ಹೇಳಿದರು.

ಕಾವೇರಿ ನದಿಗೆ ಅಣೆಕಟ್ಟು ಕಟ್ಟಿದ್ದು ನಾವು. ಜಾಗ ನಮ್ಮದು, ಹಣ ನಮ್ಮದು. ಅಂದರೆ ಎಲ್ಲವೂ ನಮ್ಮ ರಾಜ್ಯದ್ದೇ ಆಗಿರುವಾಗ ಕಾವೇರಿ ನೀರು ಕುಡಿಯಲು ಯಾರದ್ದೋ ಅಪ್ಪಣೆ ನಾವ್ಯಾಕೆ ತೆಗೆದುಕೊಳ್ಳಬೇಕು. ನಾವು ಈ ರೀತಿ ಆಗಲು ಬಿಡುವುದಿಲ್ಲ. ಏನೇ ಹೋರಾಟ ಆದರೂ ಸರಿ ಕಾವೇರಿ ಅಸ್ತಿತ್ವ ಉಳಿಸಿಕೊಳ್ಳುತ್ತೇವೆ ಎಂದು ದೇವೇಗೌಡರು ಹೇಳಿದರು. ಜನರ ಆಶೀರ್ವಾದ ನಮ್ಮ ಮೇಲೆ ಮೇಲಿದೆ. ಜನರು ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸುತ್ತಾರೆ.ಅಲ್ಲದೆ, ನೆರೆಯ ರಾಜ್ಯಗಳಲ್ಲಿ ಆಗುತ್ತಿರುವುದನ್ನು ಗಮನಿಸಿದ್ದಾರೆ. ಜನರಿಗೆ ಪ್ರಾದೇಶಿಕ ಪಕ್ಷವನ್ನು ಗೆಲ್ಲಿಸುವುದು ಒಳಿತು ಎಂಬುದು ಅರಿವಿಗೆ ಬಂದಿದೆ ಎಂದು ಹೇಳಿದರು.

Edited By

Shruthi G

Reported By

Shruthi G

Comments