ಜೆಡಿಎಸ್ 113ರ ಗಡಿ ಮೀರಿ ಅಧಿಕಾರಕ್ಕೆ ಬರುವುದು ಶತಃಸಿದ್ಧ : ಎಚ್ ಡಿಕೆ

07 Nov 2017 10:46 AM | Politics
360 Report

ಮೈಸೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಇಂದಿನಿಂದಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಲು ಜೆಡಿಎಸ್ ಮುಂದಾಗಿದೆ. ಜೆಡಿಎಸ್ ಪರ ಬಿರುಸಿನ ಪ್ರಚಾರ ನಡೆಸಲು ವಿಶೇಷವಾಗಿ ವಿನ್ಯಾಸಗೊಳಿಸಿರುವ 'ಕರ್ನಾಟಕ ವಿಕಾಸ ವಾಹಿನಿ' ವಾಹನದ ಸಂಚಾರಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಚಾಮುಂಡಿ ಬೆಟ್ಟದಲ್ಲಿ ಅಧಿಕೃತ ಚಾಲನೆ ನೀಡಿದರು.

ಜೆಡಿಎಸ್ ವಿಕಾಸ ವಾಹಿನಿ ವಾಹನವನ್ನೇರಿ ಪತ್ನಿ ಅನಿತಾ ಕುಮಾರಸ್ವಾಮಿಯವರ ಜೊತೆ ಚಾಮುಂಡೇಶ್ವರಿ ದೇಗುಲವನ್ನು ಒಂದು ಸುತ್ತು ಹಾಕಿದ ಕುಮಾರಸ್ವಾಮಿಯವರು ಮಾಧ್ಯಮದೊಂದಿಗೆ ಮಾತನಾಡಿದರು. 'ಇತ್ತೀಚಿನ ಬಹುತೇಕ ಸಮೀಕ್ಷೆಗಳು ಜೆಡಿಎಸ್ 65 ಸ್ಥಾನ ಗಳಿಸಲಿದೆ ಎಂದು ಹೇಳಿವೆ, ಆದರೆ ಇದನ್ನು ಮೀರಿ 113ರ ಗಡಿ ತಲುಪುವುದೇ ನಮ್ಮ ಏಕೈಕ ಗುರಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 113ರ ಗಡಿ ತಲುಪಿ ಅಧಿಕಾರಕ್ಕೆ ಬರುವುದು ಶತಃಸಿದ್ಧ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಜೆಡಿಎಸ್ ತೊರೆದಿದ್ದ ಬಹುತೇಕ ನಾಯಕರು ಮತ್ತೆ ಜೆಡಿಎಸ್ ಗೆ ಸೇರ್ಪಡೆಯಾವಲು ಸಂಪರ್ಕದಲ್ಲಿದ್ದಾರೆ. ಆದರೆ ಕಡೆ ಕ್ಷಣದಲ್ಲಿ ಪಕ್ಷಕ್ಕೆ ಬರುವವರಿಗೆ ರೆಡ್ ಕಾರ್ಪೆಟ್ ಹಾಸುವುದಿಲ್ಲ. ಅವಕಾಶವಾದಿ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ನುಡಿದರು.ಹೈಟೆಕ್ ವ್ಯವಸ್ಥೆಯನ್ನು ಒಳಗೊಂಡಿರುವ ಜೆಡಿಎಸ್ ನ ವಿಕಾಸ ವಾಹಿನಿ ವಾಹನವು ಜೆಡಿಎಸ್ ಅಧಿಕಾರಕ್ಕೆ ಬಂದರೆ ಈಡೇರಿಸುವ ಭರವಸೆಗಳನ್ನೊಳಗೊಂಡ ಘೋಷ ವಾಕ್ಯಗಳಿಂದ ರಾರಾಜಿಸುತ್ತಿದೆ.

Edited By

Shruthi G

Reported By

Shruthi G

Comments