ಸಿ.ಪಿ.ಯೋಗೇಶ್ವರ್ ಮಣಿಸಲು ಎಚ್ ಡಿಕೆ,ಡಿಕೆಶಿ ಮೈತ್ರಿ!

03 Nov 2017 1:30 PM | Politics
904 Report

ಮುಂಬರುವ ವಿಧಾನಸಭಾ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಚಿತ್ರ-ವಿಚಿತ್ರ ಹೊಂದಾಣಿಕೆ ಹಾಗೂ ಒಳಒಪ್ಪಂದಗಳಿಗೆ ವೇದಿಕೆಯಾಗಲಿದೆ. ಶತ್ರುಗಳು ಮಿತ್ರರಾಗಲಿದ್ದಾರೆ, ಮಿತ್ರರು ಶತ್ರುಗಳಾಗಲಿದ್ದಾರೆ ಎಂಬುದಕ್ಕೆ ತಾಜಾ ಉದದಾಹರಣೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ದೊರೆಯಲಾರಂಭಿಸಿದೆ.ಹೊಸ ಸುದ್ದಿಯೆಂದರೆ, ಯಾವ ರೀತಿ ಯೋಗೇಶ್ವರ್ ಅವರನ್ನು ಮಣಿಸಬೇಕೆಂಬ ಕಾರ್ಯತಂತ್ರವೂ ಈಗ ಸಿದ್ಧವಾಗಿದೆ.

ಅದು- ಚನ್ನಪಟ್ಟಣದಲ್ಲಿ ಕಣಕ್ಕೆ ಇಳಿಯಲಿರುವ ಜೆಡಿಎಸ್ ನ ಅಭ್ಯರ್ಥಿ (ಪ್ರಾಯಶಃ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ) ಅವರ ಗೆಲುವಿಗೆ ಪರೋಕ್ಷವಾಗಿ ಕಾಂಗ್ರೆಸ್ ಕೂಡ ಶ್ರಮಿಸಲಿದೆ. ಅದಕ್ಕಾಗಿ ಕಾಂಗ್ರೆಸ್ ನಿಂದ  ಕಣಕ್ಕಿಳಿಸಲು ನಾಮ್ಕೇವಾಸ್ತೆ ಅಭ್ಯರ್ಥಿಯೊಬ್ಬರ ಹುಡುಕಾಟ ನಡೆದಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ಹುಡುಕಾಟ ಯೋಗೇಶ್ವರ್ ಅವರ ಆಪ್ತರು ಹಾಗೂ ಬಲಗೈ ಬಂಟರನ್ನು ಸೆಳೆಯುವ ಸ್ವರೂಪದಲ್ಲಿದೆ. ಉನ್ನತ ಮೂಲಗಳ ಪ್ರಕಾರ ಮಾಜಿ ತಾಲೂಕು ಪಂಚಾಯ್ತಿ ಸದಸ್ಯ ಮಲ್ವೇಗೌಡ ಸೇರಿದಂತೆ ಯೋಗೇಶ್ವರ್ಗೆ ಆಪ್ತರಾಗಿರುವ ಬಲಗೈ ಬಂಟರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಈ ನಾಯಕರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ಧುರೀಣರು ಪಕ್ಷದಲ್ಲಿ ಉಳಿದು ಕೊಂಡರೆ ಟಿಕೆಟ್ ಕೊಡಿಸುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆಲ್ಲ ಕಾರಣ ಯೋಗೇಶ್ವರ್ ಬಿಜೆಪಿಯನ್ನು ಹಳೆ ಮೈಸೂರು ಭಾಗದಲ್ಲಿ ಚಿಗುರಿಸುವ ಹೊಣೆ ಹೊತ್ತುಕೊಂಡಿರುವುದು ಮತ್ತು ಭವಿಷ್ಯದಲ್ಲಿ ಬಿಜೆಪಿಯ ಪಾಲಿಗೆ ಹಳೆ ಮೈಸೂರು ಭಾಗದ ಒಕ್ಕಲಿಗ ನಾಯಕನಾಗಿ ಬೆಳೆಯುವ ಮಹಾತ್ವಾಕಾಂಕ್ಷೆ ಹೊಂದಿರುವುದು. ಚನ್ನಪಟ್ಟಣ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ತಮ್ಮ ಸಾಮರ್ಥ್ಯ ತೋರಿಸಿರುವ ಯೋಗೇಶ್ವರ್ ಇದೇ ರೀತಿ ಬೆಳೆಯಲು ಬಿಟ್ಟರೆ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಜೆಡಿಎಸ್ ಹಾಗೂ ಬೆಂಗಳೂರು ಗ್ರಾಮಾಂತರ, ಕನಕಪುರ, ರಾಮನಗರದಲ್ಲಿ ಡಿ.ಕೆ. ಶಿವಕುಮಾರ್ ಸಹೋದರರು ಹೊಂದಿರುವ ಪ್ರಾಬಲ್ಯಕ್ಕೆ ಸವಾಲಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಇತ್ತೀಚೆಗೆ ವಿದ್ಯುತ್ ಖರೀದಿ ಸದನ ಸಮಿತಿ ಸಭೆಯ ವಿವರ ತಿಳಿಸುವ ನೆಪದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭ ಪ್ರಧಾನವಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆಯೇ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಜೆಡಿಎಸ್ನಿಂದ ಸ್ಪರ್ಧಿಸುವ ಸಾಧ್ಯತೆಯಿರುವುದರಿಂದ ಅವರಿಗೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ನೀಡುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿತ್ತು ಎನ್ನಲಾಗಿದೆ. ಇದಕ್ಕೆ ಪರ್ಯಾಯವಾಗಿ ಜೆಡಿಎಸ್ ಕೂಡ ಕೆಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಅನುಕೂಲವಾಗುವಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆಯೂ ಮಾತುಕತೆ ನಡೆಯಿತು ಎನ್ನಲಾಗಿದೆ.

ಈ ಮಾತುಕತೆಯ ಮೊದಲ ಹಂತವಾಗಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಹೊಂದಿರುವ ಪ್ರಾಬಲ್ಯ ಕುಗ್ಗಿಸಲು ಅವರ ಆಪ್ತರನ್ನು ಒಂದೋ ಜೆಡಿಎಸ್ ಅಥವಾ ಕಾಂಗ್ರೆಸ್ ಸೆಳೆಯಬೇಕು ಎಂದು ನಿರ್ಧಾರವಾಗಿದೆ. ಇದರ ಭಾಗವಾಗಿ ಕಾಂಗ್ರೆಸ್ನ  ಟಿಕೆಟ್ ಅನ್ನು ಯೋಗೇಶ್ವರ್ ಆಪ್ತರಿಗೆ ನೀಡುವ ಚಿಂತನೆ ನಡೆದಿದೆ ಎನ್ನಲಾಗಿದೆ. ಪ್ರಾಥಮಿಕ ಹಂತದಲ್ಲಿ ಯೋಗೇಶ್ವರ್ ಆಪ್ತರ ಮಲ್ವೇಗೌಡ ಸೇರಿದಂತೆ ಹಲವರ ಮೇಲೆ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಡಿವಾಸ್ತವವಾಗಿ ಯೋಗೇಶ್ವರ್ ಅವರು ಕಾಂಗ್ರೆಸ್ನಲ್ಲೇ ಉಳಿದರೆ ಅವರಿಗೆ ಟಿಕೆಟ್ ತಪ್ಪಿಸಿ ಅವರ ಸಹೋದರ ಎ.ಸಿ. ರಾಜೇಶ್ ಅವರಿಗೆ ಚನ್ನಪಟ್ಟಣದ ಟಿಕೆಟ್ ನೀಡುವುದು ಮತ್ತು ಯೋಗೇಶ್ವರ್ ಮದ್ದೂರು ಕ್ಷೇತ್ರಕ್ಕೆ ವಲಸೆ ಹೋಗುವಂತೆ ಮಾಡುವುದು ಈ ಭಾಗದ ಕಾಂಗ್ರೆಸ್ ನಾಯಕರ ಚಿಂತನೆಯಾಗಿತ್ತು.

ಆದರೆ, ಕಾಂಗ್ರೆಸ್ನಲ್ಲಿ ಡಿ.ಕೆ. ಶಿವಕುಮಾರ್ ಸಹೋದರರ ಹಿಡಿತ ಮೀರಿ ಬೆಳೆಯುವುದು ಕಷ್ಟ ಮತ್ತು ಬಿಜೆಪಿ ಸೇರಿದಂತೆ ಹಳೆ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕನಾಗಿ ಬೆಳೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಯೋಗೇಶ್ವರ್ ಪಕ್ಷ ತ್ಯಜಿಸಿದರು ಎಂಬುದು ಕಾಂಗ್ರೆಸ್ ನಾಯಕರ ಭಾವನೆ. ಇದಾಗುತ್ತಿದ್ದಂತೆಯೇ ಚನ್ನಪಟ್ಟಣ ಕ್ಷೇತ್ರದಲ್ಲಿ ಶಿವಕುಮಾರ್ ಅವರ ಸಂಬಂಧಿ ವಿಧಾನಪರಿಷತ್ ಸದಸ್ಯ ರವಿ ಅವರನ್ನು ಚನ್ನಪಟ್ಟಣ ಅಥವಾ ರಾಮನಗರ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಚಿಂತನೆಯಿತ್ತು. ಆದರೆ, ಈ ತಂತ್ರ ಫಲ ಕೊಡುವುದಿಲ್ಲ ಮತ್ತು ಯೋಗೇಶ್ವರ್ಗೆ ಅನಾಯಾಸವಾಗಿ ಲಾಭವಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ಸಂಬಂಧಿಯನ್ನು ಚನ್ನಪಟ್ಟಣದಿಂದ ಕಣಕ್ಕೆ ಇಳಿಸದಿರಲು ಶಿವಕುಮಾರ್ ಸಹೋದರರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇದಾದ ನಂತರವೇ ಯೋಗೇಶ್ವರ್ ಆಪ್ತರನ್ನೇ ಕಾಂಗ್ರೆಸ್ನಿಂದ ಕಣಕ್ಕೆ ಇಳಿಸುವ ಚಿಂತನೆ ಆರಂಭಗೊಂಡಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ನಾಯಕತ್ವದ ಒತ್ತಾಸೆಯೂ ಇದೆ. ಏಕೆಂದರೆ, ಬಿಜೆಪಿ ಇದುವರೆಗೂ ಏನೆಲ್ಲ ಪ್ರಯತ್ನ ಮಾಡಿದರೂ ಹಳೆ ಮೈಸೂರು ಭಾಗವನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಅಲ್ಲಿ ಏನಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹೋರಾಟ. ಒಂದು ವೇಳೆ ಸಂಘಟನೆ ಚಾತುರ್ಯ ಹೊಂದಿರುವ ಯೋಗೇಶ್ವರ್ ಹಳೆ ಮೈಸೂರು ಭಾಗದ ನಾಯಕನಾಗಿ ಬೆಳೆಯುವಲ್ಲಿ ಯಶಸ್ವಿಯಾದರೆ ಆಗ ಬಿಜೆಪಿಗೆ ಹಳೆ ಮೈಸೂರು ಎಂಬ ಇದುವರೆಗೂ ಕೈಗೂಡದ ಪ್ರದೇಶ ಎಟಕುವ ಸಂಭವನೀಯತೆ ಇದೆ. ಈ ದೂರಗಾಮಿ ಸಾಧ್ಯತೆಯನ್ನು ಚಿಗುರಿನಲ್ಲೇ ಚಿವುಟಲು ಡಿಕೆಶಿ. ಹಾಗೂ ಕುಮಾರಸ್ವಾಮಿ ಈ ಪ್ರಯತ್ನ ನಡೆಸುತ್ತಿದ್ದು, ಇದಕ್ಕೆ ರಾಜ್ಯ ಕಾಂಗ್ರೆಸ್ ನಾಯಕತ್ವದ ಸಮ್ಮತಿಯೂ ಇದೆ ಎನ್ನಲಾಗಿದೆ.

Edited By

Shruthi G

Reported By

Shruthi G

Comments