ಯಾವುದೇ ಅನ್ಯಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ : ಎಚ್.ಡಿ. ರೇವಣ್ಣ

02 Nov 2017 3:50 PM | Politics
642 Report

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ 140 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಸದ್ಯದಲ್ಲೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.ಜೆಡಿಎಸ್ ನಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಸಾಕಷ್ಟು ಮಂದಿ ಇದ್ದಾರೆ. ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಇಲ್ಲದಿದ್ದಕ್ಕೆ ಕಳೆದ ನಂಜನಗೂಡು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಹೈಜಾಕ್ ಮಾಡಲಾಯಿತು. ಆ ಪರಿಸ್ಥಿತಿ ನಮಗಿಲ್ಲ ಎಂದು ತಿರುಗೇಟು ನೀಡಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅನ್ಯಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. 224 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.ಈ ಹಿಂದೆ ಅಭ್ಯರ್ಥಿಗಳನ್ನು ಹೈಜಾಕ್ ಮಾಡಿದ್ದಕ್ಕೆ ಬಿಜೆಪಿಯ ಪರಿಸ್ಥಿತಿ ಏನಾಯಿತು ಎಂಬುದು ತಿಳಿದಿದೆ. 120 ಸ್ಥಾನ ಗಳಿಸಿದ್ದ ಬಿಜೆಪಿ ಕಳೆದ ಚುನಾವಣೆಯಲ್ಲಿ 40 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಕೋಮುವಾದಿ ಪಕ್ಷವನ್ನು ಹೊಡೆದೋಡಿಸುತ್ತೇವೆಂದು ಹಿಂದಿನಿಂದ ಪ್ರಾದೇಶಿಕ ಪಕ್ಷವನ್ನು ತುಳಿಯಲು ಹೊರಟರೆ ಬಿಜೆಪಿಗೆ ಆದ ಪರಿಸ್ಥಿತಿ ಕಾಂಗ್ರೆಸ್ ಗೂ ಎದುರಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಜೆಡಿಎಸ್ ನಲ್ಲಿ ಯಾವುದೇ ಬಣ ಇಲ್ಲ. ಅಲ್ಲಿರುವುದು ದೇವೇಗೌಡ-ಕುಮಾರಸ್ವಾಮಿ ಒಂದೇ ಬಣ. ಮುಂದಿನ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಶುಕ್ರದೆಸೆ ಇದೆ. ಬಿಜೆಪಿ ಮಿಷನ್ 150 ಎಂದು ಹೇಳಿಕೆ ನೀಡಲಿ, ಕಾಂಗ್ರೆಸ್ ಕೂಡ 150 ಸ್ಥಾನ ಗೆಲುವು ಸಾಧಿಸುತ್ತೇವೆ ಎನ್ನಲಿ, ನಮ್ಮದು 113 ಪಂಚಮ ಕಾರ್ಯ ಸಿದ್ದಿ ಸಂಖ್ಯೆ. ಅಷ್ಟು ಸ್ಥಾನದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಎಚ್.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಅಭ್ಯರ್ಥಿ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಘೋಷಣೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದಲ್ಲಿ ತಮ್ಮನ್ನು ಸೇರಿದಂತೆ ಸಾಕಷ್ಟು ಮಂದಿ ಸಿಎಂ ಆಗುವ ಅರ್ಹತೆ ಉಳ್ಳವರು ಇದ್ಧಾರೆ. ಆದರೆ ಇದರಲ್ಲಿ ಗೊಂದಲ ಇಲ್ಲ. ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆ 20 ತಿಂಗಳು ಉತ್ತಮ ಆಡಳಿತ ನೀಡಿದ ಅನುಭವವಿದೆ. ಮುಂದೆ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಾರೆ ಎಂದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲ ತಲೆದೋರಿದ ಪರಿಣಾಮ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ. 1.83 ಕೋಟಿ ಅಡಿಕೆ ಮರ ಹಾಗೂ 44.56 ಲಕ್ಷ ತೆಂಗಿನ ಮರ ಸಂಪೂರ್ಣ ನಾಶವಾಗಿದೆ. ಇನ್ನಿತರ ಬೆಳೆಗಳು ಸೇರಿದಂತೆ ಸುಮಾರು 8 ಸಾವಿರ ಕೋಟಿ ಬೆಳೆ ನಷ್ಟವಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯೇ ವರದಿ ಸಲ್ಲಿಸಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರವಿಗೆ ಧಾವಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.ರೈತರ ಸ್ಥಿತಿ ದಯನೀಯವಾಗಿದೆ. ಇಂತಹ ಸ್ಥಿತಿಯಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಆಯೋಜಿಸಿದೆ. ರ್ಯಾಲಿ ಆಯೋಜಿಸಿರುವುದು 5 ವರ್ಷ ನಡೆಸಿದ ಭ್ರಷ್ಠಾಚಾರ ಮತ್ತಿತರ ತಪ್ಪನ್ನು ತಿದ್ದುಕೊಳ್ಳುವ ಸಲುವಾಗಿಯೇ ಎಂದು ಪ್ರಶ್ನಿಸಿದರು.ರ್ಯಾಲಿ ಆಯೋಜಿಸಿರುವುದಕ್ಕೆ ತಮ್ಮ ಅಭ್ಯಂತರವಿಲ್ಲ. ರ್ಯಾಲಿ ಮಾಡಿಕೊಳ್ಳಲಿ ಆದರೆ ರೈತರು ಸಂಕಷ್ಟದಲ್ಲಿರುವಾಗ ಅವರ ನೆರವಿಗೆ ಸರ್ಕಾರಗಳು ಧಾವಿಸಬೇಕು. ಇದು ನಮ್ಮ ಬೇಡಿಕೆ ಎಂದರು.

ತೆಂಗು, ಅಡಿಕೆ ಹಾಗೂ ಇನ್ನಿತರ ಬೆಳೆಗಳು ನಾಶವಾದ ಪರಿಣಾಮ ರೈತರು ತೊಂದರೆಗೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡದೇ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದರು.ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

 

Edited By

Shruthi G

Reported By

Shruthi G

Comments