ಏನೇ ಆದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ : ಸಿಎಂ

23 Oct 2017 10:16 AM | Politics
283 Report

ಟಿಪ್ಪು ಸುಲ್ತಾನ್‌ ನನ್ನು ವಿರೋಧಿಸುವವರು, ಮೊದಲು ಇತಿಹಾಸ ತಿಳಿದುಕೊಳ್ಳಲಿ. ಮೈಸೂರು ಯುದ್ಧ ಏಕೆ ಮತ್ತು ಹೇಗೆ ನಡೆದವು? ಟಿಪ್ಪು ಹೇಗೆ ಮಡಿದ ಎನ್ನುವುದನ್ನು ಇತಿಹಾಸದಿಂದ ತಿಳಿಯಲಿ ಎಂದು ಸಲಹೆ ನೀಡಿದರು.‘ಯಾರು ಬರಲಿ, ಬಿಡಲಿ ಟಿಪ್ಪು ಜಯಂತಿ ಮಾಡೇ ಮಾಡ್ತೀವಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎಂದು ಸಚಿವ ಅನಂತಕುಮಾರ್ ಹೆಗಡೆಗೆ ತಿರುಗೇಟು ನೀಡಿದರು. ಕೆಜೆಪಿ ಪಕ್ಷ ಸ್ಥಾಪಿಸಿದ್ದ ಯಡಿಯೂರಪ್ಪ, ಟಿಪ್ಪು ವೇಷ ತೊಟ್ಟು, ಖಡ್ಗ ಹಿಡಿದು ಪೋಜು ನೀಡಿದ್ದರು. ಆಗ ಶೋಭಾ ಕರಂದ್ಲಾಜೆ ಕೂಡ ಇದ್ದರು. ಈಗ ಮಾತ್ರ ‘ನನ್ನ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಬೇಡ’ ಎಂದು ಹೇಳುತ್ತಿದ್ದಾರೆ. ವಿಶ್ರಾಂತ ಕುಲಪತಿ ಶೇಖ್ ಅಲಿಯವರು ಟಿಪ್ಪು ಕುರಿತು ಬರೆದ ಪುಸ್ತಕಕ್ಕೆ ಆಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮುನ್ನುಡಿ ಬರೆದಿದ್ದರು. ಆಗ ಟಿಪ್ಪು ಸುಲ್ತಾನ್ ದೇಶಭಕ್ತ ಎಂದು ಕರೆದಿದ್ದ ಶೆಟ್ಟರ, ಈಗ ರಾಗ ಬದಲಿಸಿದ್ದಾರೆ. ಇದು ಬಿಜೆಪಿ ಮುಖಂಡರ ನಿಜವಾದ ಬಣ್ಣ ಎಂದು ಹೇಳಿದರು. ಇತಿಹಾಸ ತಿಳಿದುಕೊಳ್ಳದವರಿಂದ, ಚರಿತ್ರೆಯನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದ ಅವರು, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ದೇಶಭಕ್ತ. ಅದಕ್ಕಾಗಿಯೇ ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ ಎಂದು ಸಮರ್ಥಿಸಿಕೊಂಡರು. ಕಾರ್ಯಕ್ರಮಕ್ಕೆ ಯಾರನ್ನೂ ಒತ್ತಾಯದಿಂದ ಕರೆತರಲು ಸಾಧ್ಯವಿಲ್ಲ. ಯಾರೊಬ್ಬರು ಕಾರ್ಯಕ್ರಮಕ್ಕೆ ಬರದೇ ಇದ್ದರೆ ಏನೂ ಅಗುವುದಿಲ್ಲ. ಕಾನೂನು, ಸುವ್ಯವಸ್ಥೆಗೂ ತೊಂದರೆ ಆಗುವುದಿಲ್ಲ. ಏನೇ ಆದರೂ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

Edited By

Shruthi G

Reported By

Madhu shree

Comments