ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಿರುವ ಸಿಎಂ ಸಿದ್ದರಾಮಯ್ಯ

23 Sep 2017 4:35 PM | Politics
402 Report

ನಾನು ಬಡತನದಲ್ಲಿ ಓದಿ ಬಂದಿದ್ದೇನೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಸ್ಥಿತಿಗತಿ ಏನೆಂಬುದು ನನಗೆ ಗೊತ್ತು. ಈ ಕಾರಣಕ್ಕಾಗಿಯೇ ವಿದ್ಯಾಸಿರಿ ಸೇರಿದಂತೆ ಅನೇಕ ಶಿಕ್ಷಣಮುಖಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಇದೀಗ ಲ್ಯಾಪ್ಟಾಪ್ಗಳನ್ನು ನೀಡುವ ಮೂಲಕ ಶ್ರೀಮಂತ ಮಕ್ಕಳಿಗೆ ಬಡ ಮಕ್ಕಳು ಸಹ ಶೈಕ್ಷಣಿಕ ಸ್ಪರ್ಧೆಯೊಡ್ಡುವಂತಾಗಬೇಕು ಸಿಎಂ ಹೇಳಿದರು. 

ಪದವಿ ಹಂತದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ನವೆಂಬರ್ನಲ್ಲಿ ಗುಣಮಟ್ಟದ ಲ್ಯಾಪ್ಟಾಪ್ಗಳನ್ನು ಉಚಿತವಾಗಿ ವಿತರಣೆ ಮಾಡಲು ನಿರ್ಧರಿಸಿದ್ದು, 1.96 ಲಕ್ಷ ಮಕ್ಕಳಿಗೆ ಇದರ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶುಕ್ರವಾರ ನಗರದ ಕಿತ್ತೂರುರಾಣಿ ಚನ್ನಮ್ಮ ಪ್ರೌಢಶಾಲೆ ಮೈದಾನದಲ್ಲಿ ಜರುಗಿದ ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲ್ಯಾಪ್ಟಾಪ್ಗಳಿಂದ ಜಾಗತಿಕ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದ್ದು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಮಗ್ರ ಪ್ರಗತಿಗೆ ನೆರವಾಗಲಿದೆ ಎಂಬ ಆಶಯದಿಂದ ಮಕ್ಕಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡುವ ನಿಲುವು ತೆಗೆದುಕೊಂಡಿರುವೆ. ಹಾಗಂತ ಇವು ತೋರಿಕೆಗಾಗಿ ನೀಡುವ ಲ್ಯಾಪ್ಟಾಪ್ ಅಲ್ಲ. ಅತ್ಯಂತ ಗುಣಮಟ್ಟದ ಬ್ರಾಂಡೆಡ್ ಕಂಪನಿಯ ಲ್ಯಾಪ್ಟಾಪ್ಗಳನ್ನೇ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. 

ಇನ್ನು ನಾನು ಪದವಿ ಓದುವ ದಿನಗಳಲ್ಲಿ ಹಾಸ್ಟೆಲ್ ಸೌಲಭ್ಯ ಇರಲಿಲ್ಲ. ರೂಂ ಮಾಡಿಕೊಂಡು, ನಾನೇ ಅಡುಗೆ ಮಾಡಿಕೊಂಡು, ಹೋಟೆಲ್ನಿಂದ ಸಾಂಬಾರ್ ತಂದುಕೊಂಡು ಉಂಡು ಕಾಲೇಜಿಗೆ ಹೋಗುತ್ತಿದ್ದೇನು. ಇದನ್ನು ನೆನಪಿಸಿಕೊಂಡೇ ವಿದ್ಯಾಸಿರಿ ಯೋಜನೆ ಜಾರಿಗೆ ತಂದೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವ ಹಾಗೂ ಶ್ರಿ ಮಂತರು ಎಂಬ ಬೇಧ ಪುಟ್ಟ ಮಕ್ಕಳಲ್ಲಿ ಬರಬಾರದು ಎಂಬ ಕಾರಣಕ್ಕಾಗಿಯೇ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮ ಕೊಟ್ಟೆ ಎಂದರು.

Edited By

venki swamy

Reported By

Madhu shree

Comments