ಇಂದಿರಾ ಕ್ಯಾಂಟೀನ್ ಹಿಂದಿಕ್ಕಿದ ಅಪ್ಪಾಜಿ ಕ್ಯಾಂಟೀನ್: ರೇಟೂ, ಟೇಸ್ಟೂ ಎರಡೂ ಬೆಸ್ಟ್!

23 Aug 2017 11:59 AM | Politics
1421 Report

ಬೆಂಗಳೂರು: ನಗರದ ಎಲ್ಲಾ ಪ್ರದೇಶಗಳಲ್ಲಿ ಈಗ ಇಂದಿರಾ ಕ್ಯಾಂಟೀನ್ ನದ್ದೇ ಹವಾ, ಆದರೆ ಹನುಮಂತನಗರದಲ್ಲಿ ಪರಿಸ್ಥಿತಿ ತೀರಾ ವಿಭಿನ್ನ. ಜೆಡಿಎಸ್ ಮುಖಂಡ ಶರವಣ ಸ್ಥಾಪಿಸಿರುವ ದೇವೇಗೌಡರ ಹೆಸರಿನ ಅಪ್ಪಾಜಿ ಕ್ಯಾಂಟೀನ್ ಹೆಚ್ಚು ಫೇಮಸ್ ಆಗಿದೆ.

ಅಪ್ಪಾಜಿ ಕ್ಯಾಂಟೀನ್ ನಲ್ಲಿ ಈ ಮೊದಲು ಪಾರ್ಸೆಲ್ ನೀಡಲಾಗುತ್ತಿತ್ತು. ಕೆಲವರು 10 -15 ತಟ್ಟೆ ಇಡ್ಲಿ ಮತ್ತು 10 ಪ್ಲೇಟ್ ರೈಸ್ ಬಾತ್ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದಾಗಿ, ಕೇವಲ 20 ನಿಮಿಷಗಳಲ್ಲಿ ತಿಂಡಿ ಖಾಲಿಯಾಗುತ್ತಿತ್ತು, ನಂತರ ಬಂದ ಹಲವರು ಖಾಲಿ ಹೊಟ್ಟೆಯಲ್ಲಿ ಹಿಂದಿರುಗತ್ತಿದ್ದರು. ಹೀಗಾಗಿ ಪಾರ್ಸೆಲ್ ಸೇವೆ ಸ್ಥಗಿತಗೊಳಿಸಿದೆವು ಎಂದು ಅಪ್ಪಾಜಿ ಕ್ಯಾಂಟೀನ್ ಸಿಬ್ಬಂದಿ ವೆಂಕಟೇಶ್ ಹೇಳುತ್ತಾರೆ. 

ಇನ್ನೂ ಅಪ್ಪಾಜಿ ಕ್ಯಾಂಟೀನ್ ಆರಂಭವಾದ ಮೇಲೆ ಸ್ಥಳೀಯ ದರ್ಶಿನಿಗಳಲ್ಲಿ ಬ್ಯುಸಿನೆಸ್ ಕಡಿಮೆಯಾಗಿದೆ, ಶೇ.30-40 ರಷ್ಟು ವ್ಯವಹಾರ ಕುಸಿದಿದೆ ಎಂದು ಸ್ಥಳೀಯ ಹೊಟೇಲ್ ನಲ್ಲಿ ಕೆಲಸ ಮಾಡುವ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ, 

ಕಳೆದ ಒಂದು ತಿಂಗಳಿಂದ ಅಂದರೆ ಇಂದಿರಾ ಕ್ಯಾಂಟೀನ್ ಆರಂಭವಾಗುವ ಮುನ್ನ ಅಪ್ಪಾಜಿ ಕ್ಯಾಂಟೀನ್ ಆರಂಭವಾಗಿದ್ದಕ್ಕೆ ಕೆಲವರು  ಇದನ್ನು ರಾಜಕೀಯ ಲಾಭಕ್ಕಾಗಿ ತೆರೆಯಲಾಗಿದೆ ಎಂದು ಆರೋಪಿಸಿದ್ದರು. ಮೆನು ಮತ್ತು ದರ ನಿಗದಿಯ ಬಗ್ಗೆ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಜನಕ್ಕೆ ಬೇಕಾಗಿರುವುದು ಊಟ, ಅದೂ ಕಡಿಮೆ ಬೆಲೆಗೆ ಹೆಚ್ಚಿನ ಊಟ ರಾಜಕೀಯ ಮೈಲೇಜ್ ಅವರಿಗೆ ಅವಶ್ಯಕತೆಯಿಲ್ಲ,

ಬೆಳಗ್ಗೆ  7 ಗಂಟೆಗೆ ಅಪ್ಪಾಜಿ ಕ್ಯಾಂಟೀನ್ ಮುಂದೆ ಜನ ಸಾಲುಗಟ್ಟಿ ನಿಂತಿರುತ್ತಾರೆ, ನಂತರ 7.30 ಕ್ಕೆ ಕ್ಯಾಂಟೀನ್ ಆರಂಭವಾಗುತ್ತದೆ. ಶ್ರೀನಗರದ 50 ಅಡಿ ರಸ್ತೆಯಲ್ಲಿ ಪ್ರಮುಖವಾಗಿ ಆಟೋ ಡ್ರೈವರ್, ಸೇಲ್ಸ್ ಎಕ್ಸಿ ಕ್ಯೂಟಿವ್ಸ ಮತ್ತು ದಿನಗೂಲಿ ನೌಕರರು, ಸಾಲುಗಟ್ಟಿ ನಿಂತಿರುತ್ತಾರೆ. ಇದರಿಂದ ಕೆಲವೊಮ್ಮ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ,  ಬೆಳಗ್ಗೆ 7.30 ರಿಂದ 9 ಗಂಟೆವರೆಗೆ ಉಪಹಾರ, ಮಧ್ಯಾಹ್ನ 1ರಿಂದ ಮೂರುಗಂಟೆ ವರೆಗೆ ಊಟ ಇರುತ್ತದೆ, ಇಲ್ಲಿನ ಆಹಾರ ಗುಣಮಟ್ಟ ಚೆನ್ನಾಗಿರುತ್ತದೆ. ಹೀಗಾಗಿ ಕಾಯುವುದರಿಂದ ಯಾವುದೇ  ಸಮಸ್ಯೆಯಿಲ್ಲ ಎಂದು ಆಟೋ ಚಾಲಕ ರಾಜೇಶ್ ಅಭಿಪ್ರಾಯ.

Courtesy: Kannadaprabha

Comments