ಬಿಜೆಪಿ ವಿರುದ್ಧ ಕಾಂಗ್ರೆಸ್ ಆನ್'ಲೈನ್ ಸಮರ!

12 Aug 2017 9:38 AM | Politics
966 Report

ಬೆಂಗಳೂರು: ಸೋಷಿಯಲ್ ಮೀಡಿಯಾ ದಾಳಿಯಲ್ಲಿ ಮುಂದಿರುತ್ತಿದ್ದ ಬಿಜೆಪಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಬಿಜೆಪಿಯು ಸೋಷಿಯಲ್ ಮೀಡಿಯಾದಲ್ಲಿ ಯಾವ ಪ್ರಮಾಣದಲ್ಲಿ 'ಪ್ರಾಪಗ್ಯಾಂಡಾ' ಮಾಡುತ್ತದೆಯೋ ಅದನ್ನು ಮೀರಿಸುವ ಪ್ರತಿತಂತ್ರ ಕಾಂಗ್ರೆಸ್ನಿಂದಲೂ ಆರಂಭವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬುರಾವ್ ಅವರ ನೇತೃತ್ವದಲ್ಲಿ ತಯಾರಾಗಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಯೋಧರು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಆರಂಭಿಸಿದ್ದಾರೆ. ದಿನೇಶ್ ಗುಂಡುರಾವ್ ಒತ್ತಾಸೆ ಮೇರೆಗೆ ಆರಂಭಗೊಂಡಿರುವ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್'ನಲ್ಲಿ ಈಗಾಗಲೇ 170 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರವೇ ಈ ಸಂಖ್ಯೆ 500 ಮುಟ್ಟಲಿದೆ.

ಬಿಜೆಪಿಯ ಸೈಬರ್ ಪಡೆ ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ಬಗ್ಗೆ ನಡೆಸುವ ಪ್ರತಿಯೊಂದು ದಾಳಿಗೆ ತಕ್ಕ ಮಾರುತ್ತರ ನೀಡುವುದು. ಹಬ್ಬಿಸುವ ಸುಳ್ಳು ಸುದ್ದಿಗಳನ್ನು ಹೆಕ್ಕಿ ಅದರ ಹಕೀಕತ್ತನ್ನು ಪ್ರಚುರ ಪಡಿಸುವುದು. ಬಿಜೆಪಿ, ಆ ಪಕ್ಷದ ನಾಯಕರು ಮತ್ತು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಬಣ್ಣದ ಮಾತುಗಳ ಹಿಂದಿನ ಸತ್ಯವನ್ನು ಸೋಷಿಯಲ್ ಮೀಡಿಯಾ ಮುಂದೆ ತೆರದಿಡುವುದು ಈ ಪಡೆಗೆ ವಹಿಸಿರುವ ಕಾರ್ಯಗಳು.

ಜಿಲ್ಲಾ ಮಟ್ಟದಲ್ಲೂ ಇಂತಹ ಸೈಬರ್ ಪಡೆ ಹಾಗೂ ಕಚೇರಿ ಆರಂಭಿಸುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರ ಪರ ವಾಟ್ಸ್‌ಅಪ್ ಗ್ರೂಪ್ಗಳನ್ನು ಹುಟ್ಟುಹಾಕುವುದು. ಈ ಗ್ರೂಪ್'ನಲ್ಲಿ ಕನಿಷ್ಠ 5 ಸಾವಿರದಿಂದ 15 ಸಾವಿರದವರೆಗೂ ಸದಸ್ಯರನ್ನುಹೊಂದಿ ಕಾಂಗ್ರೆಸ್ ನಿಲುವು ಹಾಗೂ ಕಾರ್ಯಕ್ರಮಗಳನ್ನು ಬಿಂಬಿಸುವ ಕಾರ್ಯವನ್ನು ಮಾಡಲು ಉದ್ದೇಶಿಸಿದೆ.

Edited By

venki swamy

Reported By

venki swamy

Comments