ಡಿ.ಹೆಚ್ ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್ ಪ್ರಸ್ತಾವನೆ

30 May 2017 6:38 PM | Politics
290 Report

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಹೆಚ್ ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಪಕ್ಷ ಇವತ್ತು ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಸಲ್ಲಿಸಿದೆ.

ಕಾಂಗ್ರೆಸ್ ನ ಪರಿಷತ್ ಸದಸ್ಯ ಐವಾನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯರಾದ ವಿ.ಎಸ್ ಉಗ್ರಪ್ಪ, ಜಬ್ಬಾರ್ ಖಾನ್, ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಇಂದು ಪರಿಷತ್ ಕಾರ್ಯದರ್ಶಿ ಶ್ರೀನಿವಾಸ್ ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

೭೫ ಸದಸ್ಯರ ಬಲ ಹೊಂದಿರುವ ವಿಧಾನ ಪರಿಷತ್ ನಲ್ಲಿ ಸದ್ಯ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿಯ ಅಭ್ಯರ್ಥಿ ಡಿ.ಹೆಚ್ ಶಂಕರಮೂರ್ತಿ ೨೦೧೧ರಿಂದ ದೀರ್ಘಾವಧಿ ಪರಿಷತ್ ಸಭಾಪತಿಯಾಗಿ ಅಧಿಕಾರದಲ್ಲಿದ್ದಾರೆ. ಇದೀಗ ಅವರ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯನ್ನು ತಂದು ಕೂರಿಸಲು ಕಾಂಗ್ರೆಸ್ ಮುಂದಾಗಿದೆ.

ಸಭಾವತಿ ಅವರ ನಡೆ ಅಸಮಾಧಾನ ತರುತ್ತಿತ್ತು :

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯ ಸಭಾಪತಿ ಡಿ.ಹೆಚ್ ಶಂಕರಮೂರ್ತಿ ಬದಲಿಸುವ ಪ್ರಯತ್ನ ನಡೆಸಿಯೇ ಇದ್ದೇವೆ. ಪರಿಷತ್ ನಲ್ಲಿ ಇವರ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲ, ಇವರು ಬಿಜೆಪಿಯ ಪ್ರತಿನಿಧಿ, ಅವರ ಕಾರ್ಯನಿರ್ವಹಣೆ ಅನುಮಾನ ಮೂಡಿಸುತ್ತಿದೆ. ಇವರ ಪದಚ್ಯುತಿಗೆ ಕಾರಣವನ್ನು ಸದನದ ಮುಂದಿಡಲಾಗುವುದು ಎಂದು ವಿದಾನಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ತಿಳಿಸಿದ್ದಾರೆ.

 

೧೪ ದಿನಗಳಲ್ಲಿ ಸದನದಲ್ಲಿ ನಿರ್ಣಯ ಪ್ರಸ್ತಾಪವಾಗಲಿದ್ದು, ಕಾಂಗ್ರೆಸ್ ಸದಸ್ಯರ ಬಲಾಬಲದ ಕೊರತೆ ಇದೆ. ಆದರೆ ನಿರ್ಣಯ ಮಂಡನೆ ವೇಳೆಗೆ ಸದಸ್ಯರ ಬಲಾಬಲ ಗೊತ್ತಾಗಲಿದೆ ಎಂದರು.

Edited By

Vinay Kumar

Reported By

Sudha Ujja

Comments