ಅಮೆರಿಕದ ಹೊಸ ಆಡಳಿತದಲ್ಲಿ 5 ಲಕ್ಷ ಭಾರತೀಯರಿಗೆ ಪೌರತ್ವ ನೀಡಲು ಜೋ ಬೈಡನ್ ಚಿಂತನೆ
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ ಆಗುತ್ತಿರುವಂತೆಯೇ ಅಮೆರಿಕದಲ್ಲಿ ವಾಸವಿರುವ 11 ದಶಲಕ್ಷ ದಾಖಲೆ ರಹಿತ ವಲಸೆಗಾರರಿಗೆ ಅಮೆರಿಕದ ಪೌರತ್ವ ನೀಡುವ ನಿಟ್ಟಿನಲ್ಲಿ ಹೊಸ ನೀತಿಗಳನ್ನ ರೂಪಿಸುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ. ಇದರಲ್ಲಿ 5 ಲಕ್ಷ ಭಾರತೀಯರು ಸೇರಿದ್ದಾರೆ. ಅಷ್ಟೇ ಅಲ್ಲ, ವರ್ಷಕ್ಕೆ ಕನಿಷ್ಠ 95 ಸಾವಿರ ಸಂಖ್ಯೆಯಲ್ಲಿ ನಿರಾಶ್ರಿತರನ್ನು ಅಮೆರಿಕಕ್ಕೆ ಬರಮಾಡಿಕೊಳ್ಳುವುದನ್ನೂ ಈ ಯೋಜನೆಯಲ್ಲಿ ಒಳ್ಳಗೊಳ್ಳಲಾಗಿದೆ.
ಕುಟುಂಬಗಳು ಒಟ್ಟಿಗೆ ಇರಬೇಕೆಂಬ ಆದ್ಯತೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಾರತೀಯರೂ ಸೇರಿದಂತೆ ಸುಮಾರು 1.1 ಕೋಟಿ ದಾಖಲೆರಹಿತ ವಲಸಿಗರಿಗೆ ಪೌರತ್ವ ನೀಡಲು ಸಾಧ್ಯವಾಗುವಂತೆ ವಲಸಿಗ ಶಾಸನದಲ್ಲಿ ಸುಧಾರಣೆ ತರುವ ಕೆಲಸವನ್ನು ಬೈಡನ್ ಕೂಡಲೇ ಪ್ರಾರಂಭಿಸುತ್ತಾರೆ” ಎಂದು ಡೆಮಾಕ್ರಾಟ್ ಪಕ್ಷದ ನೀತಿ ದಾಖಲೆಯಲ್ಲಿ ತಿಳಿಸಲಾಗಿದೆ.
ಬೈಡನ್ ನೇತೃತ್ವದ ಸರ್ಕಾರದ ಜತೆಗೆ ಆರಂಭದಿಂದಲೇ ಸಮನ್ವಯದಿಂದ ಕೆಲಸ ಮಾಡಲು ಕೇಂದ್ರ ಸರ್ಕಾರ ಯೋಜಿಸಿದೆ. ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಕಮಲಾ ಹ್ಯಾರಿಸ್ ಅವರು 2021ರ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಬಳಿಕ ಅವರನ್ನು ಭಾರತಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಪ್ರಮಾಣ ವಚನ ಸ್ವೀಕಾರದ ನಂತರ ಜಗತ್ತಿನ ಪ್ರಜಾತಂತ್ರ ದೇಶಗಳ ಮುಖ್ಯಸ್ಥರ ಸಮಾವೇಶಕ್ಕೆ ಬೈಡನ್ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ದೊರೆಯುವ ನಿರೀಕ್ಷೆ ಇದೆ. ಆಹ್ವಾನ ಬಂದರೆ ಅಮೆರಿಕದ ಹೊಸ ಅಧ್ಯಕ್ಷ ಮತ್ತು ಪ್ರಧಾನಿ ಮೋದಿಯ ಭೇಟಿಗೂ ಇದು ವೇದಿಕೆ ಒದಗಿಸಲಿದೆ.
Comments