ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ: ಓರ್ವ ಬಂಧನ

12 Oct 2020 11:28 AM | General
298 Report

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ರಾಮದೇವ ಮಂದಿರದ ಮೂರ್ತಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು ಓರ್ವನನ್ನು ಬಂಧಿಸಲಾಗಿದೆ.ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇರುವ ಹಿಂದೂ ದೇವಾಲಯದ ಮೂರ್ತಿಗಳನ್ನು ಮೊಹಮ್ಮದ್ ಇಸ್ಮಾಯಿಲ್ ಎಂಬ ವ್ಯಕ್ತಿ ಧ್ವಂಸ ಮಾಡಿದ್ದಾರೆ ಎಂದು ಅಶೋಕ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಘಟನೆ ಶನಿವಾರ ನಡೆದಿದ್ದು ಪೊಲೀಸರು ಕೇಸು ದಾಖಲಿಸಿ ಓರ್ವನನ್ನು ಬಂಧಿಸಿದ್ದಾರೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ. ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಶಂಕಿತ ಆರೋಪಿ ಮುಹಮ್ಮದ್‌ ಇಸ್ಮಾಯಿಲ್‌ನನ್ನು ಬಂಧಿಸಿದ್ದಾರೆ. ಆರೋಪಿಯು ಮಾನಸಿಕ ಅಸ್ವಸ್ಥನಾಗಿದ್ದರಿಂದ ಈ ಕೃತ್ಯ ಎಸಗಿದ್ದಾನೆಯೇ ಇಲ್ಲವೇ ಉದ್ದೇಶಪೂರ್ವಕವಾಗಿ ಎಸಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಜಿಲ್ಲಾ ಎಸ್‌ಪಿ ಇಪ್ಪತ್ತನಾಲ್ಕು ಗಂಟೆಯೊಳಗೆ ತನಿಖೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂಗಳನ್ನು ಹಾಗೂ ಮಂದಿರಗಳನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಆಗಾಗ ದಾಳಿ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ.  ಹೀಗಾಗಿ ಪಾಕ್‌ನಲ್ಲಿ ಇದುವರೆಗೂ 428 ದೇವಸ್ಥಾನಗಳ ಪೈಕಿ 20 ಮಾತ್ರ ಸುಸ್ಥಿತಿಯಲ್ಲಿವೆ.  ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಅಲ್ಲಿ ಅಧಿಕೃತ ಮಾಹಿತಿ ಪ್ರಕಾರ, 75 ಲಕ್ಷ ಹಿಂದೂಗಳು ನೆಲೆಸಿದ್ದಾರೆ.

Edited By

venki swamy

Reported By

venki swamy

Comments