ಖ್ಯಾತ ಸಂಗೀತ ದಿಗ್ಗಜ ಎಸ್ ಪಿ ಬಾಲಸುಬ್ರಹ್ಮಣ್ಯಂ ವಿಧಿವಶ
ಕರೊನಾ ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಎಸ್‌ಪಿಬಿ ಅವರನ್ನು ಆ.5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 50 ದಿನಗಳಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್. ಪಿ. ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ 1 ಗಂಟೆ ನಾಲ್ಕು ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಸಾವಿತ್ರಿ, ಪುತ್ರ ಚರಣ್, ಪುತ್ರಿ ಪಲ್ಲವಿ ಅವರನ್ನು ಅಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದರು.ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದ ವೈದ್ಯರು ಅಮೆರಿಕದ ತಜ್ಞರ ನೆರವು ಕೂಡಾ ಪಡೆದುಕೊಂಡಿದ್ದರು. ಆದರೆ, ವೈದ್ಯರು ಹಾಗೂ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.
ಬಾಲಸುಬ್ರಹ್ಮಣ್ಯಂ ಅವರು ಹುಟ್ಟಿದ ದಿನ ಜೂನ್ 4, 1946. ಅವರು ಆಂಧ್ರಪ್ರದೇಶ ಚಿತ್ತೂರಿನ ಕೊನೇಟಮ್ಮಪೇಟಾ ಎಂಬಲ್ಲಿನ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸಿದರು. ಬಾಲು ವ್ಯವಸ್ಥಿತವಾಗಿ ಸಂಗೀತ ಕಲಿಯಲಿಲ್ಲ. ಹರಿಕಥೆ ಹೇಳುತ್ತಿದ್ದ ತಂದೆ ಎಸ್.ಪಿ.ಸಾಂಬಮೂರ್ತಿಯವರೇ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆದರು. ಮುಂದೆ ಮೇರು ಪ್ರಸಿದ್ಧಿ ಪಡೆದ ನಂತರದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದರು.
ಶ್ರೀ ಶ್ರೀ ಮರ್ಯಾದ ರಾಮಣ್ಣ (1966) ತೆಲುಗು ಚಿತ್ರಕ್ಕಾಗಿ ಹಾಡುವ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು ಹಿನ್ನೆಲೆಗಾಯನ ಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರು ಗಳಿಸಿದರು. ಎಸ್‌ಪಿಬಿ ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿದ್ದಾರೆ.
Comments