ವ್ಯಕ್ತಿಯೊಬ್ಬನಿಗೆ ಕ್ಲಾಸ್ ತೆಗೆದುಕೊಂಡ ಮಠದ ವಿದ್ಯಾರ್ಥಿ : ಲೈಕ್ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್

23 Jan 2019 4:25 PM | General
231 Report

ನಿನ್ನೆ ತಾನೇ ಶ್ರೀ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಯ ಅಂತಿಮ ದರ್ಶನಕ್ಕೆ  ಮಠಕ್ಕೆ ಬಂದ ಲಕ್ಷೋಪಾದಿ ಭಕ್ತಾದಿಗಳಿಗಾಗಿ ದಾಸೋಹವನ್ನು ಕೂಡ ಏರ್ಪಡಿಸಲಾಗಿತ್ತು. ಈ ಮಧ್ಯೆ ಮಠದ ಹುಡುಗನೊಬ್ಬ ಪ್ರಸಾದವನ್ನು ವೇಸ್ಟ್ ಮಾಡುತ್ತಿರುವ ವ್ಯಕ್ತಿಗೆ ಸಿಕ್ಕಾಪಟ್ಟೆ  ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.  ಅಂದಹಾಗೇ  ಆ ವಿಡಿಯೋ ಬಗ್ಗೆ ಇದೀಗ  ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

''ಅನ್ನ ದೇವರಿಗಿಂತ ಅನ್ಯ ದೇವರಿಲ್ಲ'' ಎನ್ನುವ ಮಾತಿದೆ. ಅದನ್ನು ಅಕ್ಷರಶಃ ಸಿದ್ದಗಂಗಾ ಮಠದಲ್ಲಿ ಪಾಲಿಸಲಾಗುತ್ತಿದೆ. ಅಲ್ಲಿಯೇ ಓದುತ್ತಿರುವ ಒಬ್ಬ ಹುಡುಗ ಅನ್ನದ ಮಹತ್ವವನ್ನು ಸಾರಿದ ವಿಡಿಯೋ ನಿನ್ನೆಯಿಂದ ವೈರಲ್ ಆಗಿದೆ. ದಾಸೋಹದ  ಉದ್ದೇಶವೇ ಹಸಿವು ನೀಗಿಸುವುದು. ಆ ಕಾರಣಕ್ಕಾಗಿಯೇ ಮಠದಲ್ಲಿ ಲಕ್ಷಾಂತರ ಜನಕ್ಕೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ. ನಿನ್ನೆ ಪ್ರಸಾದವನ್ನು ತಟ್ಟೆಗೆ ಹಾಕಿಸಿಕೊಂಡು, ಅದನ್ನು ಕಸದ ರೀತಿ ಚೆಲ್ಲುತ್ತಿದ್ದ  ವ್ಯಕ್ತಿಗೆ ಮಠದ ವಿದ್ಯಾರ್ಥಿ ಅನ್ನದ ಬೆಲೆಯನ್ನ ಹೇಳಿ ಕೊಟ್ಟಿದ್ದಾನೆ. ಈ ಹುಡುಗನ ವಿಡಿಯೋವನ್ನು ನಟ ಗಣೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನ್ನದ ಬೆಲೆ ಸಿದ್ದಗಂಗಾ ಮಠದ ಮಕ್ಕಳಿಗೆ ಗೊತ್ತು ಎಂದು ಆ ಹುಡುಗನ ಕಾರ್ಯವನ್ನು ಮೆಚ್ಚಿದ್ದಾರೆ. ಗಣೇಶ್ ಮಾತ್ರವಲ್ಲದೆ ನಟ ರವಿಶಂಕರ್ ಗೌಡ ಸಹ ಈ ವಿಡಿಯೋ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

Edited By

Manjula M

Reported By

Kavya shree

Comments