ಎಚ್ಚರ..! ಕಟ್ಟೆಚ್ಚರ..!! : ಮಹಾಮಾರಿ ಮಂಗನಕಾಯಿಲೆಗೆ ಬಲಿಯಾಗದಿರಿ…!!!

03 Jan 2019 12:22 PM | General
149 Report

ಶಿವಮೊಗ್ಗ ಜಿಲ್ಲೆಯಾದ್ಯಂತ ಈಗಾಗಲೇ ಸಿಕ್ಕಾಪಟ್ಟೆ ಮಹಾ ಮಾರಕ ಮಂಗನ ರೋಗ ವ್ಯಾಪಿಸಿದೆ. ಸದ್ಯ ನಾಲ್ವರು ಬಲಿಯಾಗಿದ್ದು ಸುಮಾರು  50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಇದೆ. ಪ್ರತೀ ವರ್ಷವು ಈ ಕಾಯಿಲೆ ಬರದಂತೆ ಅಥವಾ ಈ ರೋಗ ತಡೆಯಲು ಲಸಿಕೆ ಹಾಕಲಾಗುತ್ತಿತ್ತು. ಆದರೆ ಈ ಬಾರಿ ಲಸಿಕೆ ಹಾಕುವ ಮುನ್ನವೇ ನಾಲ್ವರು ಮೃತಪಟ್ಟಿರುವುದು ಜನರಲ್ಲಿ ಆತಂಕ ಮೂಡಿಸಿದೆ.ಸಾರ್ವಜನಿಕರ ಗಮನಕ್ಕೆ ವೈದ್ಯಕೀಯ ಇಲಾಖೆಯಿಂದ ರೋಗ ತಡೆಗಟ್ಟಲು ಈಗಾಗಲೇ ಅರಿವು ಮೂಡಿಸಲಾಗಿದೆ.ಕಾಡಿನೊಳಗೆ ಸಂಚರಿಸುವ ಪ್ರತಿಯೊಬ್ಬರು ಡಿಎಂಪಿ ಆಯಿಲ್‍ನ್ನು  ಹಚ್ಚಿಕೊಳ್ಳಬೇಕು. ಈ ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಮುಖದ ಭಾಗವನ್ನು ಹೊರತುಪಡಿಸಿ ಮೈ, ಕೈಗೆ ಲೇಪಿಸಿಕೊಳ್ಳಬೇಕು. ಇದರ ಅವಧಿ 6 ಗಂಟೆಯಾಗಿದ್ದು, ಮಂಗಗಳು ಸಾವಿಗೀಡಾಗಿರುವುದು ಕಂಡುಬಂದಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು, ಅರಣ್ಯ ಇಲಾಖಾಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಬೇಕು.

ಯಾವುದೇ ಕಾರಣದಿಂದಲೂ ಮಂಗ ಸಾವನ್ನಪ್ಪಿದ್ದರೂ ಸಹ ಅದರ ಬಳಿ ಯಾರೂ ಹೋಗಬಾರದು, ಕೈಯಿಂದ ಮುಟ್ಟಬಾರದು. ಮಂಗ ಸಾವನ್ನಪ್ಪಿದ ಜಾಗದಲ್ಲಿ ಕನಿಷ್ಠ ಒಂದು ವಾರ ಯಾರೂ ಓಡಾಡಬಾರದು. ಈ ವ್ಯಾಪ್ತಿಯ 150 ಅಡಿ ಸುತ್ತಳತೆಯ ಪ್ರದೇಶದಲ್ಲಿ ಮೆಲಾಥಿನ್ ಸಿಂಪಡಿಸಿ ಶವ ಪರೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.
ಸಾಗರದ ಮಂಡವಳ್ಳಿಯ ಪಾರ್ಶ್ವನಾಥ ಜೈನ್(47), ವಾಟೆಮಕ್ಕಿಯ ಕೃಷ್ಣಪ್ಪ(54), ಕಂಚಿಕಾಯಿ ಮಂಜುನಾಥ್(24) ಮತ್ತು ತೀರ್ಥಹಳ್ಳಿಯ ಗಂಟೆ ಜನಗಲು ಗ್ರಾಮದ ಸುಂದರಿ ಎಂಬವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿಬಿರ ಆಯೋಜನೆ ಮಾಡುವುದರ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ. ಇದರಲ್ಲಿ ಪಿಡಿಒ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸೇರಿದಂತೆ  ಆರೋಗ್ಯ  ಇಲಾಖೆ ವತಿಯ ಅಧಿಕಾರಿಗಳು ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ರೋಗ ಹರಡದಂತೆ ಕಟ್ಟೆಚ್ಚರ ವಹಿಸಿದ್ದಾರೆ.

Edited By

Kavya shree

Reported By

Kavya shree

Comments