ಕಾಯಕವೇ ಕೈಲಾಸ ಎಂದು ಜಗಕೆ ಸಾರಿದ ನಿಜ ದಂಪತಿಗಳು ಯಾರು ಗೊತ್ತಾ..?

09 Nov 2018 5:46 PM | General
753 Report

ಬಸವಾದಿ ಶರಣರ ಅನುಭಾವದ ಮೂಸೆಯಲ್ಲಿ ಮೂಡಿಬಂದಿದ್ದು ವಚನ ಸಾಹಿತ್ಯ. ವರ್ಗ ಬೇಧ, ಲಿಂಗ ಬೇಧ, ಜಾತಿ ಬೇಧಗಳನ್ನು ತ್ಯಜಿಸಿ ಸರ್ವ ಸಮಾನತೆ ಕಡೆಗೆ ನಡೆದ 12ನೇ ಶತಮನಾದ ಶರಣರು ತಮ್ಮ ರಚನೆ ಕಾವ್ಯ ಅಥವಾ ಸಾಹಿತ್ಯವಾಗಲಿ ಎಂಬ ಉದ್ದೇಶದಿಂದ ವಚನಗಳನ್ನು ಬರೆದದ್ದಲ್ಲ. ಆಡು ಭಾಷೆಯಲ್ಲಿ ಸರಳವಾಗಿ ಸಾಮಾನ್ಯ ವ್ಯಕ್ತಿಯೂ ಅರಿಯಲು ಹಾಗೂ ಪ್ರೇರಣೆಗೊಳ್ಳಲು ವಚನಗಳು ರಚನೆ ಆದವು. ಈ ಸಮಾಜವೇ ಒಂದು ಮಂಟಪ, ಕಾಯಕದಲ್ಲಿ ತೊಡಗಿಸಿಕೊಂಡಾಗ ಆಗುವ ಅನುಭಾವವೇ ವಚನಗಳಿಗೆ ಸ್ಫೂರ್ತಿ. ಜೀವನವೇ ಒಂದು ಅನುಭವ ಮಂಟಪ ಆಗುತ್ತದೆ. ಹಾಗಾಗಿ ಪ್ರತಿಯೊಂದು ವಚನದ ಹಿಂದೆ ಒಂದು ಪ್ರಸಂಗ ಇರತ್ತೆ, ಇದನ್ನ ತಿಳಿದಾಗ, ವಚನದ ರಚನೆ ಹೇಗಾಯ್ತು ಹಾಗು ನಾವು ನಮ್ಮ ಜೀವನದಲ್ಲಿ ವಚನದ ಸಾರವನ್ನು ಅಳವಡಿಸಿಕೊಳ್ಳುವದು ಹೇಗೆ ಎಂದು ಅರಿವು ಮೂಡುತ್ತದೆ.

ಮಾರಯ್ಯ ದಂಪತಿಗಳಿಗೆ ಸ್ವಂತದ ಭೂಮಿ ಇರಲಿಲ್ಲ, ಜೀವನ ನಿರ್ವಹಣೆಗೆ ಇತರರ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದರು. ದಿನವೆಲ್ಲಾ ಬೆವರು ಸುರಿಸಿ ದುಡಿದರೆ ಸಿಗುತ್ತಿದ್ದುದು ಅಲ್ಪ ಸ್ವಲ್ಪ ಆದಾಯ, ದುಡಿದಿದ್ದರಲ್ಲಿ ಹೊಟ್ಟೆ-ಬಟ್ಟೆಗೆ ವಿನಿಯೋಗಿಸಿ ಉಳಿದದ್ದನ್ನು ಬಸವತತ್ವ ಸಿದ್ಧಂತದಂತೆ ನೊಂದವರಿಗೆ, ದೀನದಲಿತರಿಗೆ ತೆಗೆದಿಡುತ್ತಿದ್ದರು. ಬಡತನ ಎಷ್ಟೇ ಭಾಧಿಸಿದರೂ ದಂಪತಿಗಳದ್ದು ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ. ಜಗತ್ತನ್ನು, ಸಮಾಜವನ್ನು ಪ್ರೀತಿಸುವವರ ಮನಸ್ಸೇ ಹೀಗೆ. ಒಮ್ಮೆ ಮಾರಯ್ಯ ದಂಪತಿಗಳು ಬಸವಣ್ಣನವರನ್ನು ಕಾಣಲು ಕಲ್ಯಾಣ ನಗರಕ್ಕೆ ತೆರುಳುತ್ತಾರೆ. ಅಲ್ಲಿ ದಿನನಿತ್ಯ ಸಾವಿರಾರು ಜನರಿಗೆ ಅನ್ನ ದಾಸೋಹ ಮಾಡಲಾಗುತ್ತಿರುತ್ತದೆ. ಶರಣ ಮಾರಯ್ಯನವರಿಗೆ ಜೀವನ ನಿರ್ವಹಣೆಗೆ ಹೊಸ ಊರಲ್ಲಿ ಹೊಸದೊಂದು ಕಾಯಕ ಹುಡುಕುತ್ತಿದ್ದರು.

ಆಗ ವ್ಯಾಪಾರಿಗಳು ದವಸ-ಧಾನ್ಯ ಸಾಗಿಸುವಾಗ ಅಪ್ಪಿ-ತಪ್ಪಿ ರಸ್ತೆಗೆ ಬೀಳುತ್ತಿದ್ದ ಧಾನ್ಯಗಳನ್ನು ಗುಡಿಸಿ ತಿಪ್ಪ್ಪೆಗೆ ಎಸೆಯುತ್ತಿದ್ದರು ಇದನ್ನು ಕಂಡ ಮಾರಯ್ಯರಿಗೆ  ಕುಟ್ಟುವಾಗ, ಬೀಸುವಾಗ ಧಾನ್ಯಗಳನ್ನು ಅಳೆಯುವಾಗ, ಹಂಚುವಾಗ ಸಿಡಿದು ಬಿದ್ದ, ಚೆಲ್ಲಿ ಹೋದ ಕಾಳುಗಳನ್ನು ಆಯ್ದು ತಂದರೆ ಜೀವನಾಧಾರ ಆಗ ಬಲ್ಲವು ಎಂಬುದು ಆಲೋಚನೆಗೆ ಬಂತು. ಹೀಗೆ ಆಯ್ದು ತಂದ ಅಕ್ಕಿಯಲ್ಲಿ ತಮಗೆ ಅವಶ್ಯಕತೆ ಇದ್ದಷ್ಟನ್ನು ಮಾತ್ರ ಬಳಸಿ, ಉಳಿದಿದ್ದನ್ನು ಸಮಾಜ ಸೇವೆಗೆ, ಗುರು-ಲಿಂಗ-ಜಂಗಮ ಸೇವೆಗೆ ಸಲ್ಲಿಸವುದು ಎಂದು ಮಾರಯ್ಯ ದಂಪತಿಗಳು ನಿರ್ಧರಿಸಿದರು.ಮೂರು ತಲೆಮಾರಿಗೆ ಆಗುವಷ್ಟು ದುಡಿದು, ಕೂಡಿಟ್ಟರೂ ಇನ್ನೂ ಬೇಕೆನ್ನುವ, ಬೇಕೆನಿಸಿದನ್ನು ಪಡೆಯಲು ದುರ್ಮಾಗ ಹಿಡಿಯುವ ಇಂದಿನ ಸಮಾಜಕ್ಕೆ ಮಾರಯ್ಯ ದಂಪತಿಗಳು ಅತಿಶಯವಾಗೆ ಕಾಣುತ್ತಾರೇನೋ.., ಅವ್ರು ಎಂದಿಗೂ ಆಸೆ ಪಟ್ಟವರಲ್ಲ.., ಕೂಡಿ ಇಡುವ ಮನಸ್ಸು ಮಾಡಿದವರಲ್ಲ. ಬೇಕಾದಷ್ಟನ್ನು ಮಾತ್ರ ಬಳಸಿ ಉಳಿದದ್ದನ್ನ ಬಡವರಿಗೆ ದಾನ ಮಾಡುತ್ತಿದ್ದರು. ಹಾಗಾಗಿ ಎಲ್ಲರೂ ಕೂಡ ಹಂಚಿತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು.

Edited By

Manjula M

Reported By

Manjula M

Comments