ಮನೆಯ ಒಳಗೂ ಕಾಲಿಟ್ಟಿದೆ ವಾಲ್ ಆರ್ಟ್ ಎಂಬ ಟ್ರೆಂಡ್

24 Sep 2018 12:22 PM | General
580 Report

ಸುಂದರ ಮನೆ ಅನ್ನೋದು ಪ್ರತಿಯೊಬ್ಬರ ಕನಸು.. ಮನೆ ಹೀಗೆ ಇರಬೇಕು ಎಂದು ತುಂಬಾ ಆಲೋಚನೆ ಮಾಡಿ ಮನೆ ಕಟ್ಟಿಸಿಕೊಳ್ಳುತ್ತಾರೆ. ಹೊಸ ಮನೆ ಕಟ್ಟಿ ಗೋಡೆಗಳಿಗೆ ಚಿತ್ರ ಪಟದಿಂದ ಅಲಂಕರಿಸುವುದು ಹಳೆಯ ಪದ್ಧತಿ. ಈಗೇನಿದ್ದರೂ, ವಾಲ್ ಆರ್ಟ್‍ಗಳದ್ದೇ ಮಾತು. ಎಸ್.. ಬೃಹತ್ ಗಾತ್ರದ ಫೋಟೊಗಳ ಬದಲಾಗಿ, ಇಡೀ ಗೋಡೆಯ ಮೇಲೆ ಚಿತ್ರ ಬರೆಯುವ ಕ್ರಮವೇ ವಾಲ್ ಆರ್ಟ್. ಇದಕ್ಕಾಗಿಯೇ ವಿಶೇಷ ಪರಿಣಿತ ಚಿತ್ರಕಾರರನ್ನೂ ತರಬೇತಿಗೊಳಿಸಲಾಗುತ್ತದೆ. ಕಾಗದದ ಹಾಳೆಯ ಮೇಲೆ ಬಿಡಿಸುವ ಚಿತ್ರವನ್ನೇ ದೊಡ್ಡ ಗೋಡೆಯಲ್ಲಿ ಬಿಡಿಸುವ ಮೂಲಕ ಹೊಸ ಬಗೆಯ ಒಳಾಂಗಣ ವಿನ್ಯಾಸಕ್ಕೆ ಜನ ವಾಲುತ್ತಿದ್ದಾರೆ.

ಕೆಲವು  ವರ್ಷಗಳ ಹಿಂದೆ ಶಾಲೆಯ ಗೋಡೆ, ಫ್ಲೈ ಓವರ್ ಪಿಲ್ಲರ್ ಗಳಲ್ಲಿ ವಿವಿಧ ಬಣ್ಣಗಳಲ್ಲಿ ರೇಖಾ ಚಿತ್ರಗಳ ಮೂಲಕ ವಾಲ್ ಆರ್ಟ್ ಗಳನ್ನು ಹೊಸದಾಗಿ ಪರಿಚಯಿಸಲಾಗಿತ್ತು. ಆದರೆ ಈಗ ಇವುಗಳಲ್ಲೇ ಕೊಂಚ ಬದಲಾವಣೆಯೊಂದಿಗೆ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಯುವ ಹೊಸ ವಿನ್ಯಾಸ ಕಾಲಿಟ್ಟಿದೆ. ಚಿತ್ರಕಲಾ ಪ್ರಕಾರಗಳನ್ನು ಈ ವಿಭಾಗದಲ್ಲಿ ಬಳಸುವ ಮೂಲಕ ಆಕರ್ಷಕ ಒಳಾಂಗಣ ವಿನ್ಯಾಸಕ್ಕೆ ವಾಲ್ ಆರ್ಟ್ ಹೊಸ ಸೇರ್ಪಡೆಗೊಂಡಿದೆ.ಮನೆಯ ಬೇರೆ ಬೇರೆ ಕೋಣೆಗಳಲ್ಲಿ ಅವರವರ ಆಸಕ್ತಿ ಹಾಗೂ ಇಷ್ಟಕ್ಕೆ ತಕ್ಕಂತೆ ವಾಲ್ ಆರ್ಟ್ ಮಾಡಬಹುದಾಗಿದೆ. ಚಿತ್ರಗಳು ಹೀಗೆಯೇ ಇರಬೇಕು ಅಥವಾ ಇಂತಹ ಬಣ್ಣದಲ್ಲೇ ಇರಬೇಕೆಂಬ ನಿಯಮಗಳಿಲ್ಲ. ಯಾವ ವಿಧವಾದ ಚಿತ್ರಗಳನ್ನೂ ಬರೆಸಬಹುದು. ನೀವು ಯಾವ ರೀತಿಯ ಚಿತ್ರಗಳನ್ನು ಆಯ್ಕೆ ಮಾಡುತ್ತೀರಿ ಎಂಬುದರ ಮೇಲೆ ಗೋಡೆಯ ಬಣ್ಣವನ್ನೂ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಬಿಳಿ ಬಣ್ಣದ ಗೋಡೆಗಳಿಗೆ ಕೆಂಪು, ಕಂದು, ನೀಲಿ, ಕಪ್ಪು ಬಣ್ಣಗಳಲ್ಲಿ ವಾಲ್ ಆರ್ಟ್‍ಗಳನ್ನು ರಚಿಸಲಾಗುತ್ತದೆ.ಅಲ್ಲದೇ, ವಾಲ್ ಆರ್ಟ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ತ್ರೀಡಿ ಇಮೇಜಿಂಗ್ ಬಹಳ ಸದ್ದು ಮಾಡುತ್ತಿದೆ.

ಬಣ್ಣಗಳಲ್ಲಿ ವ್ಯತ್ಯಾಸ ಮಾಡುವ ಮೂಲಕ ಹೊಸ ಗೋಡೆಯ ಮೇಲೆ ಮಾದರಿಯ ಚಿತ್ರಗಳನ್ನು ಬರೆಯುವ ಪದ್ಧತಿಯೂ ಚಾಲ್ತಿಯಲ್ಲಿದೆ. ಚಿತ್ರಗಳು ಗೋಡೆಯಿಂದ ಎದ್ದು ಕಂಡಂತೆ ಭಾಸವಾಗುವುದರೊಂದಿಗೆ ಹೆಚ್ಚು ನೈಜತೆಯಿಂದ ಕೂಡಿರುವಂತೆ ತ್ರಿಡಿ ಇಮೇಜಿಂಗ್ ವಾಲ್ ಆರ್ಟ್ ಮಾಡಲಾಗುತ್ತದೆ. ಸಾದಾ ವಾಲ್ ಆರ್ಟ್‍ಗೆ ಹೋಲಿಸಿದರೆ ಈ ವಿಭಾಗ ತುಸು ತುಟ್ಟಿ. ಆದರೆ ಮನೆಯ ಒಳಾಂಗಣ ಇನ್ನಷ್ಟು ಅಂದವಾಗಿ ಕಾಣುವುದು ನಿಜ. ಉದಾಹರಣೆಗೆ ಈ ವಾಲ್ ಆರ್ಟ್ ನಲ್ಲಿ ಮಲಗುವ ಕೋಣೆಯ ಗೋಡೆಗಳಲ್ಲಿ ಸಂಜೆ ಹೊತ್ತಿನ ಚಿತ್ರ ಚಿತ್ರಿಸಲಾಗಿದೆ ಎಂದುಕೊಳ್ಳಿ. ಆಗ ಇದಕ್ಕೆ ಪೂರಕವಾಗಿ ಗೋಡೆಗಳಿಗೆ ಕಪ್ಪು ಮಿಶ್ರಿತ ಬಿಳಿ ಬಣ್ಣ ಬಳಿಯಲಾಗುತ್ತದೆ. ಆದುದರಿಂದ ಕೋಣೆಯ ಒಳ ಹೊಕ್ಕಂತೆಯೇ ಮುಸ್ಸಂಜೆ ಹೊತ್ತಿನ ಅನುಭವವಾಗುತ್ತದೆ. ಇನ್ನು ಲಿವಿಂಗ್ ರೂಮ್, ಡೈನಿಂಗ್ ಹಾಲ್‍ಗಳಲ್ಲಿ ಫ್ಲೋರಾ ಡಿಸೈನ್ ಅಥವಾ ವಿವಿಧ ಬಣ್ಣಗಳಿಂದ ಕೂಡಿದ ಹೂವು, ಮರದ ಮೇಲೆ ಕುಳಿತ ಹಕ್ಕಿಗಳ ಚಿತ್ರ, ನವಿಲು ಹೀಗೆ ಹಲವಾರು ಚಿತ್ರಗಳನ್ನು ಬಿಡಿಸಿ ಮನೆಗೊಂದು ಹೊಸ ಲುಕ್ ಕೊಡಬಹುದು.

Edited By

Manjula M

Reported By

Manjula M

Comments