ವರಮಹಾಲಕ್ಷ್ಮೀ ವ್ರತದ ಹಿನ್ನಲೆ ಗೊತ್ತಾ..? ವ್ರತ ಆಚರಿಸಿ ಅಂದುಕೊಂಡ ಫಲ ಪಡೆದುಕೊಳ್ಳಿ

22 Aug 2018 11:57 AM | General
513 Report

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೆ ಸುರಪೂಜಿತೆ || ಶಂಖಚಕ್ರ ಗದಾಹಸ್ತೆ ಮಹಾಲಕ್ಷ್ಮಿ ನಮೋಸ್ತುತೆ || ಶ್ರಾವಣ ಮಾಸದ ಮಹತ್ವವನ್ನೆಲ್ಲಾ ಈಗಾಗಲೇ ನೀವು ತಿಳಿದು ಕೊಂಡಿದ್ದೀರಿ. ಹಿಂದೂಗಳು ಆಚರಿಸುವ ಮಂಗಳಕರವಾದ, ಪ್ರಸಿದ್ಧ ಹಬ್ಬಗಳಲ್ಲಿ ಈ ವ್ರತವೂ ಒಂದಾಗಿದೆ.

ಅದರಲ್ಲೂ ಈ ಹಬ್ಬವನ್ನು ಭಾರತದ ಹಲವು ಭಾಗಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಶ್ರಾವಣ ಮಾಸದಲ್ಲಿ ಬರುವ ಪೌರ್ಣಮಿಯ ಹತ್ತಿರ ಅಂದರೆ ಎರಡನೇ ಶುಕ್ರವಾರ ಈ ವ್ರತವನ್ನು ಎಲ್ಲಾ ಮುತೈದೆಯರು ಶ್ರದ್ಧಾಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ.

ವರ ಮಹಾಲಕ್ಷ್ಮಿ ವ್ರತದ ಹಿನ್ನೆಲೆಭವಿಷ್ಯೋತ್ತರ ಪುರಾಣದಲ್ಲಿ ಈ ದಿನದಂದೇ ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆಂದು ಹೇಳಿದ್ದಾರೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯ ಪಡೆದು ಮಂದರ ಪರ್ವತವನ್ನು ಮಂಥನ ಮಾಡುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸಿದವಳೇ ಲಕ್ಷ್ಮೀ. ಇದೇ ಕಾರಣದಿಂದಾಗಿ ಈ ದಿನವನ್ನು ಉತ್ತರ ಭಾರತದಲ್ಲಿ ಉತ್ಸವವನ್ನಾಗಿ ಆಚರಿಸಿದರೆ, ದಕ್ಷಿಣ ಭಾರತದಲ್ಲಿ ವ್ರತದ ರೂಪದಲ್ಲಿ ಆಚರಿಸಲಾಗುತ್ತದೆ.

ವ್ರತಾಚರಣೆಯ ಮಹತ್ವ: ಇದು ಧನಲಕ್ಷ್ಮಿಗೆ ಅರ್ಪಿತವಾದದ್ದಾಗಿದ್ದು, ಇದನ್ನು ಆಚರಿಸುವುದರಿಂದ ಮನೆಯಲ್ಲಿ ಧನ-ಧಾನ್ಯ, ಸುಖ-ಶಾಂತಿ, ನೆಮ್ಮದಿ ನೆಲೆಸಿ ಕಷ್ಟಗಳು ದೂರಾಗುತ್ತದೆ ಎಂಬ ಪ್ರತೀತಿ ಇದೆ.

ಆಚರಿಸುವ ಪದ್ಧತಿ: ಲಕ್ಷ್ಮೀ ಅಂದರೆ ಶುದ್ಧತೆಯ ಸಂಕೇತವಾಗಿದೆ. ಆದ್ದರಿಂದ ಮನೆಯನ್ನು ಶುದ್ಧಗೊಳಿಸಿ ಮನೆಯ ಮುಂಭಾಗದಲ್ಲಿ ರಂಗೋಲಿ, ತೋರಣಗಳನ್ನು ಹಾಕಿ, ಸ್ನಾನ ಮಾಡಿ ಪರಿಶುದ್ಧವಾದ ಬಟ್ಟೆಗಳನ್ನು ತೊಟ್ಟು ನೈವೇದ್ಯಕ್ಕೆ ತಯಾರಿಸಿ ಇಟ್ಟುಕೊಳ್ಳಬೇಕು.

ನಂತರ ಕಲಶವನ್ನು ಇಟ್ಟುಕೊಂಡು ಅದಕ್ಕೆ ಸೀರೆ, ಒಡವೆಗಳಿಂದ, ಅವರವರ ಶಕ್ತಿಗೆ ಅನುಸಾರವಾಗಿ ಹೂವುಗಳಿಂದ ಅಲಂಕರಿಸಬೇಕು. ಕಮಲದ ಹೂವು ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದನ್ನು ಮಾತ್ರ ಮರೆಯದಿರಿ. ಬಿಲ್ವದ ಮರದಲ್ಲಿ ಲಕ್ಷ್ಮಿಯು ನೆಲೆಸಿರುತ್ತಾಳೆಂದು ಬಿಲ್ವಪತ್ರೆಯಿಂದಲೂ ಪೂಜಿಸುತ್ತಾರೆ.

ಈ ಪೂಜೆ ಅಂದರೆ ವ್ರತವನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಅತ್ಯಂತ ಶ್ರೇಷ್ಠ. ಆದರೆ ಇಂದಿನ ದಿನಗಳಲ್ಲಿ ಬೆಳಿಗ್ಗೆಯಿಂದ ಉಪವಾಸವಿರಲು ಸಾಧ್ಯವಾಗದೇ ಇರುವುದರಿಂದ ಬೆಳಗಿನ ಸಮಯದಲ್ಲೇ ಆಚರಿಸುತ್ತಾರೆ. ಹೀಗೆ ಆಚರಿಸಿದರೂ ಯಾವುದೇ ರೀತಿಯ ಘನ ಆಹಾರವನ್ನು ಸ್ವೀಕರಿಸದೇ ಈ ವ್ರತವನ್ನು ಆಚರಿಸಬೇಕು. ಅರ್ಚನಾ ಪ್ರಿಯಳಾದ ದೇವಿಗೆ ಕುಂಕುಮಾರ್ಚನೆ ಮಾಡಲು ಮರೆಯದಿರಿ. ಹೀಗೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ.

Edited By

Manjula M

Reported By

Manjula M

Comments