ಮಾರಣಾಂತಿಕ ನಿಫಾ ವೈರಸ್ ಬಗ್ಗೆ ತಿಳಿದುಕೊಳ್ಳ ಬೇಕಾದ ಕೆಲವು ಮಾಹಿತಿಗಳು..!

22 May 2018 10:49 AM | General
1461 Report

ದೇಶವನ್ನೇ ಬೆಚ್ಚಿಬೀಳಿಸುವಂತೆ ಕೇರಳದಲ್ಲಿ 9 ಜನರನ್ನು ಬಲಿ ಪಡೆದು ನಿಫಾ ಸೋಂಕಿನ ಕುರಿತಂತೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸೇರಿದಂತೆ ಇಡೀ ವೈದ್ಯಕೀಯ ಲೋಕವೇ ಆತಂಕಕ್ಕೆ ಒಳಗಾಗಿದೆ.ಮಲೇಶಿಯಾದ ನಿಫಾ ಸೋಂಕಿಗೆ ಈವರೆಗೂ ಕೂಡ ಲಸಿಕೆಯನ್ನು‌ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಆತಂಕಕ್ಕೆ‌ ಮೂಲ‌ ಕಾರಣವಾಗಿದೆ. ನಿಫಾ ಅಂದರೆ ಯಾವ ಕಾಯಿಲೆ.. ಅದರ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?

ನಿಫಾ ಝೂನೋಸಿಸ್ ಮಾದರಿಯ ವೈರಾಣಾಗಿದ್ದು, ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿಯೂ ಕೂಡ ಹಲವು ಬಗೆಯ ಆರೋಗ್ಯ ಸಮಸ್ಯೆಗಳಿಗೆ ಎಡೆ  ಮಾಡಿಕೊಡುತ್ತದೆ.ಸಾಮಾನ್ಯವಾಗಿ ಈ ನಿಫಾ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ ಹರಡಬಹುದಾದ ವೈರಸ್ ಆಗಿದೆ, ಈ ವೈರಸ್ ಸೋಂಕು ಬಂದಿರುವ ವ್ಯಕ್ತಿಯ ಜೊತೆ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಥವಾ ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಮತ್ತೊಬ್ಬರಿಗೆ ಹರಡುತ್ತದೆ. ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಕೂಡ ಇದು ಹರಡುವ ಸಾಧ್ಯತೆ ಇದೆ. ಬಾವಲಿಗಳ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದ್ದು, ಈ ಜಾತಿಯ ಬಾವಲಿಗಳು ತಿಂದು ಬಿಸಾಡಿರುವ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೂ ಕೂಡ ಈ ಸೋಂಕು ಹರಡುವ ಎಲ್ಲಾ ಸಾಧ್ಯತೆಗಳು ಇದೆ ಎಂದು ಆರೋಗ್ಯ ಸಂಸ್ಥೆಗಳು ತಿಳಿಸಿವೆ.

ಈ ನಿಫಾ ಮಾರಕ ವೈರಾಣುವನ್ನು ಮೊದಲ ಬಾರಿಗೆ 1998ರಲ್ಲಿ ಮಲೇಷ್ಯಾದಲ್ಲಿ ಗುರುತಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಈ ಸೋಂಕು ಹಂದಿಗಳ ಮುಖಾಂತರ ಹಬ್ಬುತ್ತಿತ್ತು. ಎನ್‌ಸಿಫಾಲಿಟಿಸ್‌-ಇನ್‌ಡ್ಯೂಸಡ್‌  ಮಯೋಕಾರ್ಡಿಟಿಸ್‌ ಮಾದರಿಯ ವೈರಸ್ ಆಗಿರುವ ನಿಫಾ, ಹೆಂಡ್ರಾ ವೈರಾಣುವನ್ನೇ ಹೋಲುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಅಂದೇ ವೈದ್ಯರು ಈ ವೈರಾಣು, ಹಂದಿ, ಕೋಳಿಯಂತಹ ಮಾಂಸಾಹಾರದಿಂದ ಈ ವೈರಾಣು ಹರಡಲ್ಪಡುತ್ತದೆ ಎಂದು ಶಂಕಿಸಿದ್ದರು. ಈ ನಿಫಾ ವೈರಾಣು 1998ರಲ್ಲೇ ಪತ್ತೆಯಾಗಿದ್ದರೂ, ಈ ವೈರಾಣುವಿಗೆ  ಇದುವರೆಗೂ ಲಸಿಕೆಯನ್ನೇ ಕಂಡು ಹಿಡಿಯಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ ಎಂದು ಹೇಳಲಾಗಿದೆ.

ನಿಫಾ ಸೋಂಕು ತಗುಲಿದರೆ, ಮೊದಲು ಅದು ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊದಲು ಮೆದುಳಿನ ನರಮಂಡಲದ ಮೇಲೆ ದಾಳಿ ನಡೆಸುವ ವೈರಾಣು ಪತ್ತೆಯಾಗಲು ಸುಮಾರು 5ರಿಂದ 14 ದಿನಗಳೇ ಬೇಕಾಗುತ್ತದೆ.ಸಾಮಾನ್ಯವಾಗಿ ಜ್ವರ, ವಿಪರೀತ ತಲೆನೋವು,  ಆಯಾಸ, ನಿದ್ರಾಹೀನತೆ, ಮಾನಸಿಕ ಗೊಂದಲ ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಈ ಸೋಂಕು ಎಷ್ಟು ಮಾರಕ ಅಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿಯು ಕೋಮಾಗೆ ಜಾರುವ ಸಂಭವವಿರುತ್ತದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮನೆಯ ಸುತ್ತ ಮುತ್ತಲಿನ ವಾತವರಣವನ್ನು ಯಾವಾಗಲೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ನೀರು ಎಲ್ಲೂ ನಿಲ್ಲದಂತೆ ನೋಡಿಕೊಳ್ಳಬೇಕು.

 

Edited By

Manjula M

Reported By

Manjula M

Comments