ಇಂದು ಮದ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಆರಂಭ

31 Mar 2018 3:36 PM | General
615 Report

ಉದ್ಯಾನನಗರಿಯ ಪಾರಂಪರಿಕ ಮತ್ತು ಧಾರ್ಮಿಕ ಮಹತ್ವದ ಬೆಂಗಳೂರು ಕರಗ ಶಕ್ಯೋತ್ಸವ ಹಾಗೂ ಮಹಾ ರಥೋತ್ಸವ ಇಂದು(ಮಾ.31) ಮಧ್ಯರಾತ್ರಿ ವಿಜೃಂಭಣೆಯಿಂದ ನಡೆಯಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಐತಿಹಾಸಿಕ ಬೆಂಗಳೂರು ಕರಗದ ಪ್ರಯುಕ್ತ ತಿಗಳರ ಪೇಟೆಯ ಪ್ರಾಚೀನ ಧರ್ಮರಾಯ ದೇವಸ್ಥಾನದ ಮಹಾ ರಥೋತ್ಸವ ಹಾಗೂ ಮುತ್ಯಾಲಮ್ಮ ದೇವಿಯ ಉತ್ಸವ ಪ್ರಯುಕ್ತ ಇಂದು ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹೋಮ-ಹವನ, ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿವೆ. ಆದಿಶಕ್ತಿ ಸ್ವರೂಪಿಣಿ ದ್ರೌಪದಿಯ ಆರಾಧನೆಯ ಸಂಕೇತವಾಗಿ ಕಳೆದ ಒಂಭತ್ತು ದಿನಗಳಿಂದ ನಡೆಯುತ್ತಿರುವ ಕರಗ ಉತ್ಸವದಲ್ಲಿ ಅಂತಿಮ ಘಟ್ಟವಾದ ಶಕ್ಯೋತ್ಸವ ಮತ್ತು ಮಹಾ ರಥೋತ್ಸವ ಅತ್ಯಂತ ಮಹತ್ವದ್ದು.ವಿಳಂಬಿ ನಾಮ ಸಂವತ್ಸರದ ಪಾಲ್ಗುಣ ಚೈತ್ರ ಷಷ್ಠಿಯ ದಿನವಾದ ಇಂದು ನಡೆಯುವ ಕರಗ ಮಹೋತ್ಸವದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹ ಕಾತುರದಿಂದ ಕಾಯುತ್ತಿದೆ. ಇಂದು ಮಧ್ಯರಾತ್ರಿ ಸರಿಯಾಗಿ 12 ಗಂಟೆಗೆ ಶ್ರೀಧರ್ಮರಾಯ ದೇವಸ್ಥಾನದಿಂದ ಶ್ರೀದ್ರೌಪದಿ ದೇವಿ ಕರಗ ಶಕ್ಯೋತ್ಸವ ಆರಂಭವಾಗಲಿದೆ. ಈ ಬಾರಿ 26 ವರ್ಷದ ಅರ್ಚಕ ಎನ್.ಮನು ಕರಗ ಹೊರಲಿದ್ದಾರೆ. ನವ ದಿನಗಳು ಕಟ್ಟುನಿಟ್ಟಿನ ನೇಮನಿಷ್ಠೆಗಳಿಂದ ವಿಧಿವಿಧಾನಗಳನ್ನು ಪೂರೈಸಿರುವ ಅವರು ಹೂವಿನ ಕರಗದ ಮೆರವಣಿಗೆಯ ನೇತೃತ್ವ ವಹಿಸಲು ಸಕಲ ರೀತಿಯಲ್ಲಿಯೂ ಸಜ್ಜಾಗಿದ್ದಾರೆ.

ಇಂದು ಬೆಳಗ್ಗೆ ನಡೆದ ವಿಶೇಷ ವಿಧಿವಿಧಾನದಲ್ಲಿ ಕರಗ ಹೊರುವ ಅರ್ಚಕ ಮನು ಅವರಿಗೆ ಅರಿಶಿಣ ಬಣ್ಣದ ಸೀರೆ ಉಡಿಸಿ, ಬಳೆ ತೊಡಿಸಿ ಕಬ್ಬನ್ ಉದ್ಯಾನವನದ ಕರಗದ ಕುಂಟೆಯಲ್ಲಿ ಅವರಿಂದ ಗಂಗೆ ಪೂಜೆ ಮಾಡಿಸಲಾಯಿತು. ಅಲ್ಲಿಂದ ಹಸಿ ಕರಗವನ್ನು ಮಂಟಪಕ್ಕೆ ಕರೆತಂದು ವಿಶೇಷ ಪೂಜೆ ನೆರವೇರಿಸಿ ದೇಗುಲಕ್ಕೆ ಕರೆತರಲಾಗಿದೆ.ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯರ ಗುಡಿಯಿಂದ ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ನಿಗದಿಗೊಳಿಸಿದ ಪ್ರದೇಶಗಳಲ್ಲಿ ಪ್ರದಕ್ಷಿಣೆ ಹಾಕಿ ಕುಲ ಪುರೋಹಿತರ ನಿವಾಸದಲ್ಲಿ ವಿಶೇಷ ಪೂಜೆ ಸ್ವೀಕರಿಸಲಾಗುವುದು. ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಹಸಿ ಕರಗ ಸೂರ್ಯೋದಯದ ವೇಳೆಗೆ ದೇವಾಲಯ ಸೇರಲಿದೆ. ಮಾರ್ಗ ಉದ್ದಕ್ಕೂ ಖಡ್ಗದಾರಿ ವೀರಕುಮಾರರು ಕರಗಕ್ಕೆ ರಕ್ಷಣೆ ನೀಡಲಿದ್ದಾರೆ. ಕರಗದ ಅಂಗವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Edited By

Shruthi G

Reported By

Shruthi G

Comments