ದೇವೇಗೌಡ್ರು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಅಂಶಗಳು..!!

09 Mar 2018 11:00 AM | General
1251 Report

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಗುತ್ತದೆ ಎಂಬ ಭರವಸೆ ನೀಡುವುದಾದರೆ, ನದಿ ನೀರಿನ ನಿರ್ವಹಣಾ ಮಂಡಳಿ ರಚಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರಿಗೆ ಹೇಳಿದ್ದಾರೆ.

ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ದೇವೇಗೌಡರು, ಕಾವೇರಿ ನದಿ ನೀರಿನ ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಯಾವುದೇ ನಷ್ಟವಾಗುವುದಿಲ್ಲ ಮತ್ತು ಸುಪ್ರೀಂಕೋರ್ಟ್‌ನ ತೀರ್ಪಿನಂತೆ ನೀರಿನಲ್ಲಿ ಹೆಚ್ಚಿನ ಪಾಲು ಸಿಗುತ್ತದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಬೇಕು. ಆ ನಂತರವಷ್ಟೇ ಸುಪ್ರೀಂ ಆದೇಶದ ಅನ್ವಯ ನಿರ್ವಹಣಾ ಮಂಡಳಿ ರಚಿಸಬಹುದು ಎಂದರು. ಅಲ್ಲದೆ, ರಾಜ್ಯದ ಏತ ನೀರಾವರಿ ಯೋಜನೆ, ಮೇಕೆದಾಟು ಯೋಜನೆ ಹಾಗೂ ಎರಡು ರಾಜ್ಯಗಳ ನಡುವಿನ ನದಿ ತಿರುವು ಯೋಜನೆಗಳ ವಿಚಾರಗಳನ್ನು ಬಗೆಹರಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಜತೆಗೆ ನಿರ್ವಹಣಾ ಮಂಡಳಿಯಿಂದಾಗಿ ರಾಜ್ಯಕ್ಕೆ 30 ರಿಂದ 35 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಗುತ್ತದೆ ಎಂಬುದನ್ನೂ ಖಾತ್ರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೇ, ತೀರ್ಪಿನ ಕೆಲವು ವಿಷಯಗಳನ್ನು ಅಧ್ಯಯನ ಮಾಡಿದ್ದೇನೆ. ಅದರ ಆಧಾರದ ಮೇಲೆ ಗಡ್ಕರಿ ಜತೆ ಚರ್ಚಿಸಿದ್ದೇನೆ. ಮರು ಪರಿಶೀಲನಾ ಅರ್ಜಿ ಹಾಕುವ ಬಗ್ಗೆಯೂ ಮಾತನಾಡಿದ್ದೇನೆ ಎಂದು ಹೇಳಿದರು. ಕರ್ನಾಟಕ ಏಕೆ ಅರ್ಜಿ ಹಾಕಿಲ್ಲ ಎಂದು ಗಡ್ಕರಿ ಅವರು ಕೇಳಿದರು. ನಾನು ಮಂಡಳಿ ರಚನೆಗೆ ಕಾಲಾವಕಾಶ ಕೇಳುವಂತೆಯೂ ಮನವಿ ಮಾಡಿದ್ದೇನೆ. ಸಂಸತ್‌ ಭವನ ಆವರಣದಲ್ಲಿ ತಮಿಳುನಾಡು ಸಂಸದರು ಮಂಡಳಿ ರಚನೆಗೆ ಒತ್ತಾಯಿಸುತ್ತಿದ್ದಾರೆ. ನಮಗೆ ಕುಡಿಯುವ ನೀರು ಎಷ್ಟು ಬೇಕು ಎನ್ನುವ ಬಗ್ಗೆ ಯೋಚಿಸಬೇಕು. ಕಾವೇರಿ ಕಣಿವೆಯ ಏತ ನೀರಾವರಿ ಯೋಜನೆಗಳನ್ನು ರದ್ದು ಮಾಡಿದ್ದಾರೆ ಎಂದು ತಿಳಿಸಿದರು. ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಸಂತೋಷ ಪಡುವಂತಹ ಅಂಶ ಇಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿರುವುದು ಗಡ್ಕರಿ ಆವರ ಗಮನಕ್ಕೆ ತಂದಿದ್ದೇನೆ. ಅವರು ಸಹ ಮರು ಪರಿಶೀಲನಾ ಅರ್ಜಿ ಹಾಕುವಂತೆ ಸಲಹೆ ನೀಡಿದರು. ಸುಪ್ರೀಂಕೋರ್ಟ್‌ ಹದಿನೈದು ವರ್ಷ ವಾಪಸ್‌ ಬರದಂತೆ ಹೇಳಿದೆ. ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರವೇ ಮರುಪರಿಶೀಲನೆ ಅರ್ಜಿ ಸಲ್ಲಿಸಲು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

ಕಾವೇರಿ ಕುರಿತು ಮುಖ್ಯಮಂತ್ರಿಗಳು ಕರೆದ ಸಭೆಗೆ ಗೈರು ಹಾಜರಿ ಕುರಿತು ಪ್ರತಿಕ್ರಿಯಿಸಿದ ದೇವೇಗೌಡರು ಸರ್ವಪಕ್ಷ ಸಭೆಗೆ ಹೋಗಲಾಗದು ಎಂದು ಮೊದಲೇ ತಿಳಿಸಿದ್ದೆ ಎಂದರು.ಈ ಮಧ್ಯೆ ಕಾವೇರಿ ನದಿ ನಿರ್ವಹಣಾ ಮಂಡಳಿ ರಚನೆ ಸಂಬಂಧ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಶುಕ್ರವಾರ ನಾಲ್ಕೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ಕರೆದಿದೆ. ಇದರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಆರು ವಾರಗಳಲ್ಲಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್‌ ಆದೇಶದಲ್ಲಿ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ ಎಂದು ಸಚಿವಾಲಯದ ಕಾರ್ಯದರ್ಶಿ ಯು.ಪಿ.ಸಿಂಗ್‌ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲೇ ತೀರ್ಪಿನ ಜಾರಿ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ದೇವೇಗೌಡ್ರು ತಮ್ಮ ಮಾತಿನಂತೆ ಕೇಂದ್ರ ಸಚಿವರನ್ನು ಭೇಟಿಯಾಗಿ ರಾಜ್ಯದ ನೀರಿನ ಸಮಸ್ಯೆಯನ್ನು ನಿವಾರಿಸಲು ಮನವಿ ಮಾಡಿದ್ದಾರೆ

Edited By

Shruthi G

Reported By

Shruthi G

Comments