ಬೆಂಗಳೂರು ನಗರದ ಅಭಿವೃಧಿಯನ್ನು ಹಾಳು ಮಾಡಿರುವುದರಲ್ಲಿ ರಾಷ್ಟ್ರೀಯ ಪಕ್ಷಗಳು ಎತ್ತಿದ ಕೈ : ವಿಶ್ವನಾಥ್ ವಾಗ್ದಾಳಿ

07 Mar 2018 5:58 PM | General
511 Report

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವಿಕಾಸಪರ್ವ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಬೆಂಗಳೂರು ನಗರವನ್ನು ಕಡೆಗಣಿಸಿವೆ ಎಂದು ವಾಗ್ದಾಳಿ ನಡೆಸಿದರು. ಇವೆರಡೂ ಪಕ್ಷಗಳಿಂದ ಬೆಂಗಳೂರು ಮತ್ತು ಮೈಸೂರು ನಗರಗಳ ಸರ್ವಾಂಗೀಣ ಅಭಿವೃದ್ಧಿಯಾಗಲಿಲ್ಲ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಬರೀ ಗುದ್ದಲಿ ಪೂಜೆಗೆ ಸೀಮಿತವಾಗಿದೆ. ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಯೋಜನೆಯನ್ನು ಕೈಗೊಳ್ಳದೆ ನಗರವನ್ನು ಕಡೆಗಣಿಸಿತು ಎಂದು ಆರೋಪಿಸಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಯೋಜನೆಯಡಿ ಬೆಂಗಳೂರಿಗೆ 25 ಕೋಟಿ, ಮೈಸೂರಿಗೆ 5 ಸಾವಿರ ಕೋಟಿ ಅನುದಾನ ನೀಡಿದ್ದರು. ಆದರೆ ಈಗಿನ ಸರ್ಕಾರ ಬೆಂಗಳೂರಿಗೆ ಖರ್ಚು ಮಾಡಿರುವುದು ಕೇವಲ 2,400 ಕೋಟಿ, ಮೈಸೂರಿಗೆ 950 ಕೋಟಿ ರೂ. ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಶೋಕ್  ಸಾರಿಗೆ ಸಚಿವರಾಗಿದ್ದಾಗ ಬಸ್ ನಿಲ್ದಾಣ ನಿರ್ಮಿಸಿ ಕಿಕ್‍ಬ್ಯಾಕ್ ಪಡೆದರು ಎಂದು ದೂರಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಪರಾಧ ಪ್ರಕರಣ ಕಡಿಮೆಯಾಗಲಿದೆ. ಕುಡಿಯುವ ನೀರಿಗೆ ಆದ್ಯತೆ ನೀಡುತ್ತೇವೆ, ಕಸ ವಿಲೇವಾರಿ ಸರಿಯಾಗಿ ನಿರ್ವಹಣೆಯಾಗಲಿದೆ. ಆದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದರು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ.ಕೆ.ಗೋಪಾಲ್ ಮಾತನಾಡಿ, ನಗರದಲ್ಲಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿವೆ. ಆದರೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಕೊಳಗೇರಿಗಳನ್ನು ಅಭಿವೃದ್ಧಿಪಡಿಸಿಲ್ಲ. ಜೆಡಿಎಸ್‍ಗೆ ಮತ ನೀಡಿದರೆ ಪದ್ಮನಾಭನಗರ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.  ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಅಧ್ಯಕ್ಷ ಆರ್.ಅಶೋಕ್, ಮುಖಂಡ ಪ್ರಸಾದ್‍ಬಾಬು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Edited By

Shruthi G

Reported By

Shruthi G

Comments