ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರ ಅಂತಿಮ ದರ್ಶನ ಪಡೆಯಲು ಹರಿದು ಬಂದ ಜನಸಾಗರ

20 Feb 2018 10:35 AM | General
785 Report

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತ ಮುಖಂಡರು, ರೈತ ಸಂಘದ ಕಾರ್ಯಕರ್ತರು, ಗಣ್ಯರು ಹಾಗೂ ಸಾವಿರಾರು ಜನರು ರೈತ ನಾಯಕ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಹುಟ್ಟೂರು ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ರಾತ್ರಿ ನಿಧನರಾದ ಪುಟ್ಟಣ್ಣಯ್ಯ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಯಿಂದ ಅವರ ಹೂಟ್ಟೂರಿಗೆ ತರಲಾಯಿತು. ಸಾವಿನ ಸುದ್ದಿ ಹರಡುತ್ತಿದ್ದಂತೆ ರಾತ್ರಿಯೇ ಮನೆಯ ಮುಂದೆ ಸಹಸ್ರಾರು ಜನ ಸೇರಿದ್ದರು.

ಬೆಳಿಗ್ಗೆಯಿಂದಲೇ ಮೃತದೇಹದ ದರ್ಶನಕ್ಕೆ ಜನಸಾಗರವೇ ಹರಿದು ಬಂತು. ರೈತ ಮುಖಂಡರು, ರೈತರು ಅಗಲಿದ ನಾಯಕನನ್ನು ನೆನೆದು ಕಣ್ಣೀರಾಗಿದ್ದರು. ತಮ್ಮ ಹೋರಾಟದ ಶಕ್ತಿ ಕುಂದಿತು ಎಂದು ದುಃಖಿಸುತ್ತಲೇ ಹಲವರು ಹೇಳಿದರು.ಪುಟ್ಟಣ್ಣಯ್ಯ ಕಳೆದ ವಾರವಷ್ಟೇ ನನ್ನ ಜತೆ ಮಾತನಾಡಿದರು. ನೀವಿಬ್ಬರೂ (ಸಹೋದರಿ ಚುಕ್ಕಿ) ಹೋರಾಟದಲ್ಲಿ ತೊಡಗಿದರೆ ವಿಧಾನಸೌಧದಲ್ಲಿ ಹಸಿರು ಟವೆಲ್ ಹಾರಿಸಬಹುದು ಎಂದು ಹೇಳಿದ್ದರು' ಎಂಬುದನ್ನು ನೆನಪಿಸಿಕೊಂಡು ಪಚ್ಚೆ ನಂಜುಂಡಸ್ವಾಮಿ ಅವರು ದುಃಖಿಸಿದರು.ಸಾಹಿತಿ ದೇವನೂರ ಮಹಾದೇವ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಿದರು.ಗುರುವಾರ (ಫೆ.22) ಪುಟ್ಟಣ್ಣಯ್ಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.ಪುತ್ರಿಯರಾದ ಅಕ್ಷತಾ, ಸ್ಮಿತಾ ವಿದೇಶದಿಂದ ಮಂಗಳವಾರ ಸಂಜೆ ಬರುತ್ತಾರೆ. ಪುಟ್ಟಣಯ್ಯ ತಂಗಿ ರೇಣುಕಾ ಬುಧವಾರ ಬರುತ್ತಾರೆ. ಗುರುವಾರ ಬೆಳಿಗ್ಗೆ ಕ್ಯಾತನಹಳ್ಳಿ ಗ್ರಾಮದ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಲಿದೆ. ಅಲ್ಲಿಯವರೆಗೆ ಮೃತದೇಹವನ್ನು ಸಂರಕ್ಷಣೆ ಮಾಡಲು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಶೈತ್ಯಾಗಾರದಲ್ಲಿ ಇಡಲಾಗಿದೆ.

ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯನವರ ಅಂತ್ಯಕ್ರಿಯೆಗೆ ಈ ನೆಲದ ಒಂದು ಬೊಗಸೆ ಮಣ್ಣನ್ನು ಅರ್ಪಿಸುತ್ತೇವೆ. ಈ ಜಿಲ್ಲೆಯಲ್ಲಿ ಅವರ ಒಡನಾಟದ ನೆನಪುಗಳಿವೆ. ಅವು ಚಿರಾಯುವಾಗಲಿ.. ಎನ್ನುತ್ತಾ ಜಿಲ್ಲೆಯ ರೈತ ನಾಯಕರು ಪುಟ್ಟಣ್ಣಯ್ಯನವರ ಒಡನಾಟ ನೆನಪಿಸಿಕೊಂಡು ಕಣ್ಣೀರಿಡುತ್ತ ನುಡಿನಮನ ಸಲ್ಲಿಸಿದರು.ನಗರದ ಎಪಿಎಂಸಿ ಸಮೀಪದ ರೈತಭವನದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಸೋಮವಾರ ಆಯೋಜಿಸಿದ್ದ ರೈತ ನಾಯಕ ಪುಟ್ಟಣ್ಣಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ಮುಖಂಡರಾದ ನಾಗಣ್ಣ ಭಾವುಕರಾದರು.ಚಳವಳಿ ಉತ್ತುಂಗದಲ್ಲಿ ಇದ್ದಾಗ ಸರ್ಕಾರಕ್ಕೆ ಸವಾಲು ಹಾಕಿ, ಅಧಿಕಾರಶಾಹಿಗೆ ಧಿಕ್ಕಾರ ಕೂಗಿದ ಹೋರಾಟಗಾರ ಶಾಸಕನಾಗಿ ಆಯ್ಕೆಯಾದ ಬಳಿಕ ಹೇಗಿರಬೇಕು ಎಂಬುದಕ್ಕೆ ಕೆ.ಎಸ್.ಪುಟ್ಟಣ್ಣಯ್ಯ ಒಂದು ಅಪ್ಪಟ ನಿದರ್ಶನ. ಪುಟ್ಟಣ್ಣಯ್ಯ ನವರು ರಾಜಕೀಯ ಪಕ್ಷಗಳ ಆಮಿಷಗಳಿಗೆ ಬಲಿಯಾಗದೆ, ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಜನರ ನಡುವೆ ಉಳಿದ ರೀತಿಯೇ ಒಂದು ಮಾದರಿ. ಚುನಾವಣೆಯಲ್ಲಿ ಸೋತಾಗಲೂ ವಿಚಲಿತರಾಗದೆ ಚಳವಳಿ ಕಟ್ಟಲು 14 ವರ್ಷ ದುಡಿದು ರೈತರ ಕಣ್ಮಣಿಯಾದರು.

ಮೂಲತಃ ಹೋರಾಟಗಾರರಾಗಿದ್ದರೂ ಶಾಸಕನ ಕರ್ತವ್ಯ ಪ್ರಜ್ಞೆಯನ್ನು ಎಂದೂ ಮರೆಯಲಿಲ್ಲ. ಸರ್ಕಾರದೊಂದಿಗೆ ಸಮನ್ವಯತೆ ಕಾಯ್ದುಕೊಂಡು ಜನರಿಗೆ ಸೌಲಭ್ಯ ಕೊಡಿಸುವತ್ತ ಸದಾ ಚಿಂತಿಸುತ್ತಿದ್ದರು. ಸಚಿವರು, ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೂ ಸೌಹಾರ್ದ ಸಂಬಂಧ ಕಾಯ್ದುಕೊಂಡ ಬಗೆ ನಿಜಕ್ಕೂ ಅಚ್ಚರಿ ಎನಿಸುತ್ತದೆ.ಕ್ಯಾತನಹಳ್ಳಿಯ ಸಾಮಾನ್ಯ ರೈತನ ಮಗನೊಬ್ಬ ಶಾಸನಸಭೆ ಪ್ರವೇಶಿಸಿದ ಪ್ರಸಂಗವನ್ನು ನೆನೆಯಲೇ ಬೇಕು. ಕಬ್ಬು ಬೆಲೆ ನಿಗದಿ, ಖರೀದಿ ಹಾಗೂ ಬಟಾವಡೆಯಲ್ಲಿ ರೈತರಿಗೆ ಆಗುತ್ತಿದ್ದ ಮೋಸದ ವಿರುದ್ಧ 1982ರಲ್ಲಿ ಮಂಡ್ಯದಲ್ಲಿ ನಡೆದ ಚಳವಳಿ ಇವರನ್ನು ಪ್ರಭಾವಿಸಿತು. ಹಸಿರು ಶಾಲಿನ ದೀಕ್ಷೆ ಪಡೆದು ರೈತ ಸಂಘದಲ್ಲಿ ಸಕ್ರಿಯರಾದರು.ಯಾವ ಸರ್ಕಾರ ಬಂದರೂ ರೈತರಿಗೆ ಅನುಕೂಲ ಆಗದು ಎಂಬುದನ್ನು ರಾಮಕೃಷ್ಣ ಹೆಗಡೆ ಸರ್ಕಾರ ಮನವರಿಕೆ ಮಾಡಿಕೊಟ್ಟಿತು. ನಾವೇಕೆ ಚುನಾವಣಾ ರಾಜಕೀಯಕ್ಕೆ ಹೋಗಬಾರದು ಎಂಬ ಜಿಜ್ಞಾಸೆ ರೈತ ಸಂಘದ ನಾಯಕರನ್ನು ಚುನಾವಣಾ ಕಣಕ್ಕೆ ಇಳಿಯುವಂತೆ ಮಾಡಿತು. ಬಾಬಾಗೌಡ ಪಾಟೀಲ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಂತೆ ಪಾಂಡವಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಯಶಸ್ಸು ಕಂಡವರು ಪುಟ್ಟಣ್ಣಯ್ಯ.ವಿಧಾನಸಭೆಯನ್ನು ಮೊದಲ ಬಾರಿಗೆ ಪ್ರವೇಶಿಸಿದಾಗ ಹಳ್ಳಿಯ ಸಾಮಾನ್ಯ ರೈತನ ಮಗ ಎಂಬುದು ಅವರ ಮುಖದಲ್ಲಿ ಗೋಚರಿಸುತ್ತಿತ್ತು. ವಿಶಿಷ್ಟ ವರ್ಚಸ್ಸು, ಚಿಂತನೆ, ಹಾಸ್ಯಪ್ರಜ್ಞೆ ಹಾಗೂ ಮಂಡ್ಯದ ಗ್ರಾಮೀಣ ಶೈಲಿಯ ಮಾತಿನ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.ಪುಟ್ಟಣ್ಣಯ್ಯನವರ ವ್ಯಕ್ತಿತ್ವ ಹಾಗೂ ನಡವಳಿಕೆಗೆ ಸಾಕ್ಷಿಯಾದ ಪ್ರಸಂಗವೊಂದನ್ನು ಮರೆಯಲು ಸಾಧ್ಯವಿಲ್ಲ. ಸಂಘಟನೆಗಳ ಮುಖಂಡರಲ್ಲಿ ಅಸಹಿಷ್ಣುತೆ ಹೆಚ್ಚು. ಪುಟ್ಟಣ್ಣಯ್ಯ ಇದಕ್ಕೆ ವಿರುದ್ಧವಾದ ಸ್ವಭಾವ ಹೊಂದಿದ್ದರು. ಸಕಾಲಿಕ ಭಿನ್ನಾಭಿಪ್ರಾಯದಿಂದ ನಂಜುಂಡಸ್ವಾಮಿ ಅವರಿಂದ ದೂರ ಉಳಿದಿದ್ದರು. ಆದರೆ, ಅವರ ಪಾರ್ಥಿವ ಶರೀರದ ಎದುರು ಕೈಕಟ್ಟಿ ನಿಂತರು. ಪಾಠ ಹೇಳಿಕೊಟ್ಟ ಗುರುವಿಗೆ ನಿಜವಾದ ನಮನ ಸಲ್ಲಿಸಿದ ಶಿಷ್ಯ ಎಂಬುದನ್ನು ತೋರಿಸಿಕೊಟ್ಟರು.

Edited By

Shruthi G

Reported By

Shruthi G

Comments