ರಾಜ್ಯೋತ್ಸವದ ವೇಳೆಗೆ ರಾರಾಜಿಸಲಿದೆ ಹೊಸ ನಾಡಧ್ವಜ

06 Feb 2018 4:29 PM | General
378 Report

ಮುಂದಿನ ಕನ್ನಡ ರಾಜ್ಯೋತ್ಸವದ ವೇಳೆ ಕರ್ನಾಟಕದಲ್ಲಿ ಹೊಸ ನಾಡಧ್ವಜ ರಾರಾಜಿಸಲಿದೆ. ಹಾಲಿ ಇರುವ ಕೆಂಪು, ಹಳದಿ ಮಿಶ್ರಿತ ನಾಡ ಧ್ವಜ ಬದಲಿಗೆ ಇನ್ನು ಮುಂದೆ ಹಳದಿ, ಹಸಿರು ಹಾಗೂ ಕೆಂಪು ಬಣ್ಣದ ನಾಡ ಧ್ವಜ ಅಸ್ತಿತ್ವಕ್ಕೆ ಬರಲಿದೆ.

ಹಾಗೊಂದು ವೇಳೆ ಹಳದಿ , ಹಸಿರು ಮತ್ತು ಕೆಂಪು ಬಣ್ಣದ ನಾಡ ಧ್ವಜವನ್ನೇ ಅಧಿಕೃತವೆಂದು ರಾಜ್ಯ ಸರ್ಕಾರ ಅಂಗೀಕರಿಸಿದರೆ ಜಮ್ಮು -ಕಾಶ್ಮೀರ ಹೊರತುಪಡಿಸಿ ದೇಶದಲ್ಲಿಯೇ ಪ್ರತ್ಯೇಕ ನಾಡಧ್ವಜ ಹೊಂದಿದ ಏಕೈಕ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ. ಪ್ರತ್ಯೇಕ ನಾಡಧ್ವಜ ಕುರಿತಂತೆ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕoತಿ ಇಲಾಖೆಯ ಕಾರ್ಯದರ್ಶಿ, ಕನ್ನಡಾಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್, ಕಾನೂನು ಇಲಾಖೆ ಸೇರಿದಂತೆ ಒಟ್ಟು 9 ಮಂದಿ ಉನ್ನತ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹಾಲಿ ಇರುವ ನಾಡ ಧ್ವಜವನ್ನು ಬದಲಾಯಿಸಿ ಹಳದಿ , ಕೆಂಪು ಹಾಗೂ ಕೆಂಪು ಬಣ್ಣ ಮಿಶ್ರಿತ ಧ್ವಜವನ್ನು ಅಂಗೀಕರಿಸಬೇಕೆಂದು ಶಿಫಾರಸ್ಸು ಮಾಡಿದೆ. ನಾವು ಹಲವು ಬಾರಿ ಚರ್ಚೆ ನಡೆಸಿ ಸರ್ಕಾರಕ್ಕೆ ಸೋಮವಾರ ವರದಿ ಸಲ್ಲಿಸಿದ್ದೇವೆ. ಈ ಪ್ರಕಾರ ಈವರೆಗೂ ನಾವು ಕನ್ನಡ ರಾಜ್ಯೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಹಾರಿಸುತ್ತಿದ್ದ ಹಳದಿ, ಕೆಂಪು ಮಿಶ್ರಿತ ನಾಡ ಧ್ವಜ ಬದಲಿಗೆ ಹಳದಿ, ಹಸಿರು ಹಾಗೂ ಕೆಂಪು ಬಣ್ಣದ ಧ್ವಜವನ್ನೇ ಅಧಿಕೃತಗೊಳಿಸುವಂತೆ ಶಿಫಾರಸು ಮಾಡಿರುವುದಾಗಿ ಸಮಿತಿಯ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಬಜೆಟ್ ವೇಳೆ ವರದಿ ಮಂಡಿಸಲು ಕನ್ನಡ ಮತ್ತು ಸಂಸ್ಕoತಿ ಇಲಾಖೆ ಸಚಿವೆ ಉಮಾಶ್ರೀ ತೀರ್ಮಾನಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಇದನ್ನು ಬಹು ಮತದಿಂದ ಅಂಗೀಕರಿಸಿಯೇ ಕೇಂದ್ರಕ್ಕೆ ಕಳುಹಿಸಿಕೊಡುವುದು ಸರ್ಕಾರದ ತೀರ್ಮಾನವಾಗಿದೆ. ಕಾನೂನು ಮಾನ್ಯತೆ ಇದೆಯೇ?: ರಾಜ್ಯ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಮುಂದಿಟ್ಟುಕೊಂಡು ಪ್ರತ್ಯೇಕ ನಾಡಧ್ವಜ ಅಸ್ತ್ರ ಬಳಸುವ ಮೂಲಕ ಪ್ರತಿಪಕ್ಷಗಳನ್ನು ಬಗ್ಗು ಬಡಿಯಲು ಮುಂದಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ರಾಜ್ಯ ಸರ್ಕಾರ ತನಗಿರುವ ಬಹುಮತವನ್ನು ಬಳಸಿಕೊಂಡು ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬಹುದು. ಆದರೆ ಕೇಂದ್ರ ಸರ್ಕಾರ ಇದನ್ನು ಒಪ್ಪುವುದೇ ಎಂಬ ಯಕ್ಷ ಪ್ರಶ್ನೆ ಎದುರಾಗುತ್ತದೆ. ರಾಷ್ಟ್ರಧ್ವಜವಾಗಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಧ್ವಜವನ್ನೇ ರಾಷ್ಟ್ರ ಧ್ವಜವಾಗಿ ಅಂಗೀಕರಿಸಲಾಗಿದೆ. ಯಾವುದೇ ರಾಜ್ಯವು ಪ್ರತ್ಯೇಕ ನಾಡಧ್ವಜವನ್ನು ಕೇಳುವಂತಿಲ್ಲ ಎಂದು ಈ ಹಿಂದೆ ಸ್ಪಷ್ಟಪಡಿಸಿತ್ತು.

 

 

Edited By

Shruthi G

Reported By

Madhu shree

Comments