ಸಂಸದೀಯ ಪಟು, ಜೆಡಿಎಸ್ ಕಟ್ಚಾಳು ವೈಎಸ್ವಿ ದತ್ತಾ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

03 Feb 2018 6:25 PM | General
775 Report

ಕಳೆದ ನಾಲ್ಕಾರು ವರ್ಷದಿಂದೀಚೆಗೆ ದೇಶದಲ್ಲಿ ರಾಜಕೀಯ ಸಿದ್ದಾಂತಗಳಿಂದಾಚೆಗೂ ಯಾವುದಾದರೂ ರಾಜಕಾರಿಣಿಯನ್ನು ಅವರ ಉತ್ತಮ ಕೆಲಸಗಳಿಗೆ ಪ್ರಶಂಸಿಸುವುದು ಅಥವಾ ಅವರನ್ನು ಹೊಗಳುವುದು ತೀರಾ ವಿರಳವಾಗಿಬಿಟ್ಟಿದೆ. ಕರ್ನಾಟಕದಲ್ಲೂ ಇದರ ಚಿತ್ರಣ ಬೇರೆಯದ್ದೇನಾಗಿಲ್ಲ. ಆಗಾಗ, ಕೆಲ ಶಾಸಕರು ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು, ಚುನಾವಣಾ ಪ್ರಚಾರದ ಸಮಯದಲ್ಲಿ ಐಷಾರಾಮಿ ಹೋಟೆಲಿನಲ್ಲಿ ಉಳಿಯದೆ ದನದ ಕೊಟ್ಟಿಗೆಯಲ್ಲಿಯೇ ರಾತ್ರಿ ಕಳೆದರು ಎಂಬಂತಹ ಮಾತುಗಳ ಅಪರೂಪಕ್ಕೆ ಕೇಳಿಬರುತ್ತವಾದರೂ, ನಿಜಕ್ಕೂ ಸಂಪೂರ್ಣವಾಗಿ ಸರಳತೆಯಿಂದ ಜೀವನ ಕಳೆಯುತ್ತಿರುವ ರಾಜಕಾರಣಿಗಳು ಕಮ್ಮಿಯೇ.

ಅಂಥವರ ನಡುವೆ, ಇವತ್ತಿನ ಕೆಸರೆರಚಾಟಗಳ ಮಧ್ಯೆಯೂ ಸರಳ, ಸಜ್ಜನಿಕೆಯ, ಅಪರೂಪದ ರಾಜಕಾರಿಣಿ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ (ವೈ.ಎಸ್.ವಿ.ದತ್ತಾ). ಅವರ ಸರಳತೆಯ ಬಗ್ಗೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಾತುಗಳು ಸುದ್ದಿಯಾಗುತ್ತಿರುತ್ತವೆ. ವಿಶೇಷವೆಂದರೆ, ಇವರ ಸುದ್ದಿಗಳನ್ನು ಪಕ್ಷಾತೀತವಾಗಿ ಎಲ್ಲರೂ ತಮ್ಮ ಫೇಸ್ ಬುಕ್ , ವಾಟ್ಸ್ ಆಪ್ ಗಳಲ್ಲಿ ಹಂಚಿಕೊಳ್ಳಲು ಹಿಂಜರಿಯುತ್ತಿಲ್ಲ. ಕಳೆದ ಭಾನುವಾರ ಕಡೂರಿನ ಶಾಸಕ ವೈ.ಎಸ್.ವಿ.ದತ್ತಾ, ತಮ್ಮ ಪತ್ನಿಯಿಂದಿಗೆ ಕಡೂರಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕೂತಿದ್ದಾಗ ಸಾರ್ವಜನಿಕರೊಬ್ಬರು ತೆಗೆದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ರಾಜ್ಯದೆಲ್ಲೆಡೆ ಹೆಸರಾಗಿರುವ ದತ್ತಾ ಜೆಡಿಎಸ್ ಪಕ್ಷದ ಹಾಲಿ ವಿಧಾನಸಭಾ ಸದಸ್ಯರು.

ಈ ಹಿಂದೆಯೂ ಇವರ ಚಿತ್ರಗಳು ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದವು.ದತ್ತಾ ಮೂಲತಃ ಪಿಯುಸಿ ವಿದ್ಯಾರ್ಥಿಗಳಿಗೆ ಗಣಿತ ಹಾಗು ಭೌತಶಾಸ್ತ್ರ ಹೇಳಿಕೊಡುವ ಉಪನ್ಯಾಸಕ. ಸುಮಾರು 25 ವರ್ಷಗಳ ಕಾಲ ಮನೆಪಾಠ ಹೇಳಿಕೊಡುತ್ತಿದ್ದವರು. ಇಂದಿಗೂ ವಿಜ್ಞಾನದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿ.ಇ.ಟಿ ಪ್ರವೇಶ ಪರೀಕ್ಷೆಗೆ ಕಡೂರಿನ ಮಕ್ಕಳಿಗೆ ಪಾಠ ಮಾಡುತ್ತಾರೆ.ಬೆಂಗ್ಳೂರಿನಲ್ಲಿದ್ದಾಗ ಹೆಚ್ಚಾಗಿ ಆಟೋರಿಕ್ಷಾದಲ್ಲೇ ಓಡಾಡುವ ದತ್ತಾ, ವಿಧಾನಸೌಧದ ಒಳಹೋಗುವುದಕ್ಕೆ ಪ್ರತಿದಿನವೂ ವಾಹನ ಅನುಮತಿ ಕೊಡಲಾಗುವುದಿಲ್ಲ ಎಂದು ವಿಧಾನಸೌಧದ ಅಧಿಕಾರಿಗಳು ಹೇಳಿದಾಗಿನಿಂದ, ಒಂದು ಆಟೋಗೆ ಪರವಾನಗಿ ತೆಗೆದುಕೊಂಡು, ಅದೇ ಆಟೋದಲ್ಲೇ ಓಡಾಡುತ್ತಾರೆ. ಸುದೀರ್ಘ 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಇಂದಿಗೂ ಆಟೋದಲ್ಲಿ, ಬಸ್ಸಿನಲ್ಲಿ, ರೈಲಿನಲ್ಲಿ ಓಡಾಡುತ್ತಾರೆ.

ವಿಧಾನಸೌಧದ ಆವರಣದಲ್ಲಿ ಐಷಾರಾಮಿ ಕಾರುಗಳ ನಡುವೆ, ಆಟೋವೊಂದು ನಿಲ್ಲುವುದು ಸದಾ ವಿಶೇಷವಾಗಿ ಗೋಚರಿಸುತ್ತದೆ. 63 ವರ್ಷದ ವೈಎಸ್ ವಿ ದತ್ತಾ ಅವರ ಮಾತು, ನಡವಳಿಕೆ, ಸರಳತೆ, ಪ್ರಾಮಾಣಿಕತೆಗಳು ಇತರೆ ರಾಜಕಾರಿಣಿಗಳಿಗೂ ಮಾದರಿಯಾಗಲೆಂಬ ಆಶಯದೊಂದಿಗೆ ಸಾರ್ವಜನಿಕರು ಇಂತಹ ಚಿತ್ರಗಳನ್ನು ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ತೇಲಿಬಿಡುತ್ತಾರೆ.ಚುನಾವಣೆಯಲ್ಲಿಯೂ ಗೆಲುವಿಗಾಗಿ ಎಲ್ಲ ರಾಜಕಾರಣಿಗಳೂ ಕೋಟಿ ಕೋಟಿ ಹಣವನ್ನು ವೆಚ್ಚ ಮಾಡುತ್ತಿದ್ದರೆ, ಸರಳತೆಯೇ ಮೂರ್ತಿವೆತ್ತಂತಿರುವ ದತ್ತಾರವರಿಗೆ ಮಾತ್ರ ಜನರೇ ದುಡ್ಡು ಕೊಟ್ಟು ಚುನಾವಣೆ ನಡೆಸಿ ಜೊತೆಗೆ ಮತವೂ ನೀಡಿ ಗೆಲ್ಲಿಸಿ ಕಳುಹಿಸಿದ್ದರು. ಇವರೂ ಸಹ ಜನರ ನಂಬಿಕೆಯನ್ನು ಕಳೆದುಕೊಳ್ಳದೆ ಇಂದಿಗೂ ಸರಳವಾಗಿಯೇ ಬದುಕುತ್ತಿದ್ದಾರೆ.ಹಳ್ಳಿಯೊಂದರ ರಸ್ತೆ ನಿರ್ಮಾಣದ ಸಮಯದಲ್ಲಿ ಶಾಸಕನಾದರೂ ಜನರೊಂದಿಗೆ ಬೆರೆತು ಮಣ್ಣು ಹೊತ್ತು ಶ್ರಮದಾನ ಮಾಡುತ್ತಾರೆ, ದಲಿತರ ಕೇರಿಗಳ ಶೌಚಾಲಯ ಸ್ವಚ್ಛಗೊಳಿಸಿ ಗಾಂಧಿಯ ಆದರ್ಶ ಪಾಲಿಸುತ್ತಾರೆ, ಪುಸ್ತಕಗಳನ್ನು ಮಾರಿ ಜನತೆಗೆ ಪುಸ್ತಕಗಳ ಮಹತ್ವ ತಿಳಿಸುತ್ತಾರೆ, ಬಡ ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ಹಾಗೂ ಶಿಕ್ಷಕನಾಗಿಯೂ ಮಕ್ಕಳಿಗೆ ಗಣಿತವನ್ನು ಭೋದಿಸುತ್ತಾರೆ. ಕಡೂರಿನ ಶಾಸಕ ಸರಳತೆಯಲ್ಲಿ ಎಲ್ಲರಿಗೂ ಮಾದರಿ.

Edited By

Shruthi G

Reported By

Shruthi G

Comments